ಕನ್ನಡಪ್ರಭ ವಾರ್ತೆ ಬೆಂಗಳೂರು
ಮೆಕ್‌ಡೋನಾಲ್ಡ್ಸ್ ಮಳಿಗೆಯಲ್ಲಿ ಆರ್ಡರ್ ಮಾಡಿದ್ದ ಫ್ರೆಂಚ್ ಫ್ರೈಸ್ ಬದಲು ಫ್ರೈಡ್ ಚಿಕನ್ ಬರ್ಗರ್ ‘ಬಿಲ್’ ನೀಡಿ, ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾರೆಂದು 2 ಕೋಟಿ ರೂ. ಪರಿಹಾರ ಕೋರಿ ಯುವಕ ಸಲ್ಲಿಸಿದ್ದ ದೂರು ಅರ್ಜಿಯನ್ನು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ವಜಾಗೊಳಿಸಿದೆ.
ಬಿಲ್ಲಿಂಗ್ ವೇಳೆ ಆಗಿರುವ ತಪ್ಪನ್ನು ಒಪ್ಪಿಕೊಂಡು ಹೆಚ್ಚುವರಿ ಬಿಲ್ ಮೊತ್ತವನ್ನು ಮೆಕ್‌ಡೋನಾಲ್ಡ್ಸ್ ಸಿಬ್ಬಂದಿ ಸ್ಥಳದಲ್ಲೇ ಮರಳಿಸಿ ಕ್ಷಮೆ ಕೇಳಿರುವ ಹಿನ್ನೆಲೆಯಲ್ಲಿ ಸೇವೆಯಲ್ಲಿ ನ್ಯೂನತೆ ಎಂದು ಪರಿಗಣಿಸಲಾಗದು ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.
33 ವರ್ಷದ ನಗರದ ಯುವಕ ಹಲಸೂರಿನ ಮಾಲ್‌ವೊಂದರಲ್ಲಿರುವ ಮೆಕ್‌ಡೋನಾಲ್ಡ್ಸ್ ಮಳಿಗೆಗೆ ತನ್ನ ಸಂಬಂಧಿ ಜೊತೆ ತೆರಳಿ ವೆಜ್ ಫ್ರೆಂಚ್ ಫ್ರೈ ಆರ್ಡರ್ ಮಾಡಿದ್ದರು. ಆದರೆ, ಬಿಲ್ಲಿಂಗ್ ಸಿಬ್ಬಂದಿ ತಪ್ಪಾಗಿ ಫ್ರೈಡ್ ಚಿಕನ್ ಬರ್ಗರ್ ಬಿಲ್ ನೀಡಿದ್ದರು. ಈ ವಿಚಾರವಾಗಿ ಸಿಬ್ಬಂದಿ ಹಾಗೂ ಯುವಕನ ನಡುವೆ ವಾಗ್ವಾದ ಆಗಿತ್ತು.
‘ನಾನು ಶುದ್ಧ ಸಸ್ಯಹಾರಿಯಾಗಿದ್ದೇನೆ. ಆದರೆ, ಆರ್ಡರ್ ಮಾಡದೇ ಇರುವ ಹೆಚ್ಚಿನ ಮೊತ್ತದ ಫ್ರೈಡ್ ಚಿಕನ್ ಬರ್ಗರ್ ಬಿಲ್ ನೀಡಲಾಗಿದೆ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಸಿಬ್ಬಂದಿಯವರು ಸಾರ್ವಜನಿಕ ಸ್ಥಳದಲ್ಲಿ ನನಗೆ ಅವಮಾನ ಮಾಡಿದ್ದಾರೆ. ಕೊನೆಗೆ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ವ್ಯತ್ಯಾಸವಾಗಿದ್ದ 100 ರು. ವಾಪಸ್ ಮರಳಿಸಿದ್ದಾರೆ. ಆದರೆ, ಕ್ಷಮಾಪಣೆ ಪತ್ರ ನೀಡಿಲ್ಲ. ಹೀಗಾಗಿ, ಮೆಕ್‌ಡೋನಾಲ್ಡ್ಸ್ ಮಳಿಗೆಯವರು 2 ಕೋಟಿ ರು. ಪರಿಹಾರ ನೀಡಬೇಕು’ ಎಂದು ವೇದಿಕೆಗೆ ಸಲ್ಲಿಸಿದ್ದ ದೂರು ಅರ್ಜಿಯಲ್ಲಿ ಯುವಕ ಕೋರಿದ್ದ.
ಮೆಕ್‌ಡೋನಾಲ್ಡ್ಸ್ ಪರ ವಕೀಲರು ವಾದ ಮಂಡಿಸಿ, ಗ್ರಾಹಕ ಮಾಡಿದ ಆರ್ಡರ್ ಪ್ರಕಾರ ಆಲೂಗಡ್ಡೆಯಿಂದ ಮಾಡಿದ ಫ್ರೆಂಚ್ ಫ್ರೈಸ್ ನೀಡಿದ್ದೇವೆ. ಬಿಲ್ಲಿಂಗ್ ವೇಳೆ ಸಿಬ್ಬಂದಿಯಿಂದ ಲೋಪವಾಗಿದೆ. ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಕ್ಷಮೆ ಕೇಳಿ ಪತ್ರವನ್ನೂ ನೀಡಿದ್ದಾರೆ. ವ್ಯತ್ಯಾಸದ ಹಣವನ್ನು ಮರಳಿಸಲಾಗಿದೆ. ಹೀಗಾಗಿ, ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದ್ದರು.
ಬಿಲ್ಲಿಂಗ್‌ನಲ್ಲಿ ಆಗಿರುವ ಲೋಪವನ್ನು ಮಳಿಗೆಯವರು ಒಪ್ಪಿಕೊಂಡು ಸರಿಪಡಿಸಿರುವ ಕಾರಣ ಗ್ರಾಹಕರ ಸೇವೆಯಲ್ಲಿ ನ್ಯೂನತೆ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟ ವೇದಿಕೆ, ಯುವಕನ ಅರ್ಜಿಯನ್ನು ವಜಾಗೊಳಿಸಿದೆ.