ಕನ್ನಡಪ್ರಭ ವಾರ್ತೆ ಉಡುಪಿನೂರಾರು ವರ್ಷ ಇತಿಹಾಸ ಹೊಂದಿರುವ ಇಲ್ಲಿನ ಮಲ್ಪೆಯ ವಡಭಾಂಡೇಶ್ವರ ಬಲರಾಮ ದೇವರಿಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ತೊಟ್ಟಂನ ಸಮನ್ವಯ ಸರ್ವಧರ್ಮ ಸಮಿತಿಯ ಸದಸ್ಯರು ಭಾಗವಹಿಸಿ ಸೌಹಾರ್ದತೆಯ ಸಂದೇಶವನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ತೊಟ್ಟಂ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ, ಎಲ್ಲ ಧರ್ಮಗಳೂ ಶಾಂತಿ ಮತ್ತು ಪ್ರೀತಿಯನ್ನು ಬೋಧಿಸುತ್ತವೆ. ತೊಟ್ಟಂ ಸಮನ್ವಯ ಸರ್ವಧರ್ಮ ಸಮಿತಿ ಇದೇ ಉದ್ದೇಶದಿಂದ ಕಾರ್ಯಾಚರಿಸುತ್ತಿದ್ದು, ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಬಯಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ವಡಭಾಂಡೇಶ್ವರ ಬಲರಾಮ ದೇವಸ್ಥಾನ ಜೀರ್ಣೋದ್ಧಾರಗೊಂಡು ಅದರ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿ ಪರಸ್ಪರ ಸೌಹಾರ್ದತೆಯ ಸಂದೇಶವನ್ನು ವಿನಿಮಯ ಮಾಡಿಕೊಂಡಿರುತ್ತೇವೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಸಾರಲು ಸಹಾಯಕವಾಗುತ್ತದೆ ಎಂದರು.ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಇದರ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ವಡಭಾಂಡೇಶ್ವರ ಬಲರಾಮ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ಈ ವೇಳೆ ದೇವಸ್ಥಾನದ ಪ್ರಮುಖರಾದ ಶಶಿಧರ ಎಂ. ಅಮೀನ್, ಟಿ. ಶ್ರೀನಿವಾಸ ಭಟ್, ನಾಗರಾಜ್ ಮೂಲ್ಕಿ, ಸಾಧು ಸಾಲ್ಯಾನ್, ಪ್ರಕಾಶ್ ಜಿ. ಕೊಡವೂರು, ಶಂಕರನಾರಾಯಣ ಐತಾಳ್, ಸಮನ್ವಯ ಸೌಹಾರ್ಧ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ಕಾರ್ಯದರ್ಶಿ ಲೆಸ್ಲಿ ಅರೋಜಾ, ಡಿಕನ್ ಸ್ಟೀಫನ್ ರೊಡ್ರಿಗಸ್, ಸಿಸ್ಟರ್ ಡಯಾನ, ಗ್ಲಾಡ್ಸನ್ ಮಾಬೇನ್, ವನಿತಾ ಫರ್ನಾಂಡಿಸ್, ಆಗ್ನೆಲ್ ಫರ್ನಾಂಡಿಸ್, ಪ್ರಭಾಕರ್, ಶೋಭಾ, ವಿನೋದ್ ಉಪಸ್ಥಿತರಿದ್ದರು.ಇದೇ ವೇಳೆ ಸಮನ್ವಯ ಸೌಹಾರ್ಧ ಸಮಿತಿಯ ಸದಸ್ಯರು, ಶ್ರೀ ಪಂಡರಿನಾಥ ವಿಠೋಭ ಭಜನಾ ಮಂದಿರ ಬಡಾನಿಡಿಯೂರು ಇದರ 77ನೇ ವಾರ್ಷಿಕ ಅಂಖಡ ಭಜನಾ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಕೂಡ ತೊಟ್ಟಂ ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.