ಕನ್ನಡಪ್ರಭ ವಾರ್ತೆ ಬೆಂಗಳೂರು
ಭವಿಷ್ಯದ ಉದ್ಯಮ ಮತ್ತು ತಂತ್ರಜ್ಞಾನ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಸಂಘ (ಎಲ್ಸಿಯಾ) ಜು. 26ರಂದು ‘ಎಲ್ಸಿಯಾ ಟೆಕ್ ಸಮ್ಮಿಟ್’ ಆಯೋಜಿಸಿದೆ ಎಂದು ಎಲ್ಸಿಯಾ ಅಧ್ಯಕ್ಷ ವಿ. ಶ್ರೀರಾಮ್‌ಕುಮಾರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಸಿಯಾ ಇದೇ ಮೊದಲ ಬಾರಿಗೆ ಟೆಕ್ ಸಮ್ಮಿಟ್ ಆಯೋಜಿಸುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯ ದಿ ಒಟೆರಾದಲ್ಲಿ ಸಮ್ಮಿಟ್ ನಡೆಯಲಿದ್ದು, ಜು.26 ಬೆಳಗ್ಗೆ 9.30ಕ್ಕೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಸಮ್ಮಿಟ್ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ತಂತ್ರಜ್ಞರು, ಉದ್ಯಮದ ನಾಯಕರು, ಅನ್ವೇಷಕರು, ಸಾರ್ವಜನಿಕ ಮತ್ತು ಖಾಸಗಿ ಸ್ವಾಮ್ಯದ ಸಂಸ್ಥೆಗಳು, ಯುವ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
‘ಮನುಷ್ಯರು, ಯಂತ್ರಗಳು ಮತ್ತು ಅರ್ಥ’ ಘೋಷವಾಕ್ಯದ ಅಡಿಯಲ್ಲಿ ನಡೆಯಲಿರುವ ಟೆಕ್ ಸಮ್ಮಿಟ್‌ನಲ್ಲಿ ಮೂರು ವಿಭಾಗದಲ್ಲಿ ಸಂವಾದಗಳನ್ನು ನಡೆಸಲಾಗುತ್ತಿದೆ. ಸಂವಾದವನ್ನು ತಂತ್ರಜ್ಞಾನ, ಬಳಕೆ, ಬಳಕೆದಾರರು ಹೇಗೆ ಬಳಸಿಕೊಳ್ಳಬೇಕು ಎಂಬ ಅಂಶಗಳನ್ನು ಕೇಂದ್ರೀಕರಿಸಿ ರೂಪಿಸಲಾಗಿದೆ. ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್ ಆಫ್ ಥಿಂಗ್ಸ್, ರೋಬೋಟಿಕ್, ಸೆಮಿಕಾನ್, ಸ್ಪೇಸ್‌ಟೆಕ್, ಹವಾಮಾನ ಬದಲಾವಣೆ ಸೇರಿ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.ಸಮ್ಮಿಟ್‌ನಲ್ಲಿ ವಿವಿಧ ಉದ್ದಿಮೆಗಳ ಭವಿಷ್ಯವನ್ನು ರೂಪಿಸಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಪ್ರದರ್ಶನ ನಡೆಸಲಾಗುತ್ತಿದೆ. ಜತೆಗೆ ಪ್ರಸ್ತುತ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳು ರೂಪಿಸಿದ ತಂತ್ರಜ್ಞಾನಗಳ ಮೇಲಿನ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಅದರಲ್ಲಿ ಉತ್ತಮ ಆವಿಷ್ಕಾರ, ತಂತ್ರಜ್ಞಾನವನ್ನು ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಮ್ಮಿಟ್‌ನಲ್ಲಿ ಆಯ್ದ 200 ಉದ್ದಿಮೆ ನಾಯಕರ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸಮ್ಮಿಟ್‌ನಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶ ಇಲ್ಲದವರಿಗೆ ಆನ್‌ಲೈನ್ ಮೂಲಕ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಿದರು. ಎಲ್ಸಿಯಾದ ಪ್ರಮುಖರಾದ ಎನ್.ಎಸ್. ರಮಾ, ಎ. ವೈದ್ಯನಾಥನ್, ವಿನಯಕುಮಾರ್ ಇದ್ದರು.
ಅನಿವಾರ್ಯವಾದರೆ ಗ್ರೇಟರ್ ಬೆಂಗಳೂರಿಗೆ ಸೇರ್ಪಡೆಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಎಲೆಕ್ಟ್ರಾನಿಕ್ ಸಿಟಿ 903 ಎಕರೆ ವಿಸ್ತೀರ್ಣದಲ್ಲಿದ್ದು, ಸ್ಮಾರ್ಟ್‌ಸಿಟಿ ವ್ಯವಸ್ಥೆಯನ್ನೂ ಹೊಂದಿದೆ. ಜೀರೋ ವೇಸ್ಟ್ ಪರಿಕಲ್ಪನೆಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಭದ್ರತೆಗಾಗಿ ರಾಜ್ಯ ಪೊಲೀಸರ ಜತೆಗೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನೂ ನಿಯೋಜಿಸಲಾಗಿದೆ. ಪ್ರತ್ಯೇಕ ಪೊಲೀಸ್ ಠಾಣೆ, ಅಗ್ನಿಶಾಮಕ ದಳ, ಪಿನ್‌ಕೋಡ್‌ಗಳನ್ನು ಎಲೆಕ್ಟ್ರಾನಿಕ್ ಸಿಟಿ ಹೊಂದಿದೆ. ಇಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಇದರ ನಡುವೆ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆ ಮಾಡುವ ಚರ್ಚೆ ನಡೆಯುತ್ತಿದ್ದು, ಅನಿವಾರ್ಯವಾದರೆ ಮಾತ್ರ ಅದಕ್ಕೆ ಸೇರಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಎಲ್ಸಿಯಾ ಅಧ್ಯಕ್ಷ ವಿ. ಶ್ರೀರಾಮ್‌ಕುಮಾರ್ ತಿಳಿಸಿದರು.