ಕನ್ನಡಪ್ರಭ ವಾರ್ತೆ ಮಂಗಳೂರುಒಂದು ‘ಬಿಂದು’ವಿನಿಂದ ಆರಂಭಿಸಿ, ಅದನ್ನು ಯಶಸ್ಸಿನ ‘ಸಿಂಧು’ವಾಗಿ ಪರಿವರ್ತಿಸಿದ ಎಸ್.ಜಿ. ಸಮೂಹ ಸಂಸ್ಥೆಗಳ ರೂವಾರಿ, ಸತ್ಯಶಂಕರ್ ಭಟ್ ಅವರ ಜೀವನದ 60 ವಸಂತಗಳ ಸಂಭ್ರಮ, ಪುತ್ತೂರಿನ ನರಿಮೊಗರಿನಲ್ಲಿರುವ ಎಸ್.ಜಿ. ಫಾರ್ಮ್‌ನಲ್ಲಿ ಅದ್ದೂರಿಯಾಗಿ ನಡೆಯಿತು.
ಸುಮಾರು ನಾಲ್ಕು ದಶಕಗಳ ಹಿಂದೆ, ಆರ್ಥಿಕ ಅಡಚಣೆಯಿಂದ ಪಿಯುಸಿ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ, ಕೇವಲ 15 ಸಾವಿರ ರುಪಾಯಿಗಳ ಬ್ಯಾಂಕ್ ಸಾಲ ಮತ್ತು 5 ಸಾವಿರ ರುಪಾಯಿಗಳ ಸರ್ಕಾರಿ ಸಹಾಯಧನದಿಂದ ಆಟೋರಿಕ್ಷಾ ಚಾಲಕನಾಗಿ ಜೀವನ ಆರಂಭಿಸಿದ ಓರ್ವ ಯುವಕ, ಈಗ 850 ಕೋಟಿ ರುಪಾಯಿಗಳ ವಹಿವಾಟು ನಡೆಸುವ ಬೃಹತ್ ಸಾಮ್ರಾಜ್ಯದ ಅಧಿಪತಿಯಾಗಿ ಬೆಳೆದ ರೋಚಕ ಪಯಣವನ್ನು ವಿಡಿಯೋ ಸಾಕ್ಷ್ಯಚಿತ್ರದ ಮೂಲಕ ಅನಾವರಣಗೊಳಿಸಲಾಯಿತು. ಇದು ‘ಶೂನ್ಯದಿಂದ ಶಿಖರಕ್ಕೆ’ ಸಾಗಿದ ಅವರ ಅದಮ್ಯ ಸಾಹಸಕ್ಕೆ ಹಿಡಿದ ಕನ್ನಡಿಯಂತಿತ್ತು.
ಈ ಶುಭ ಸಂದರ್ಭದಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ನಾಡಿನ ಗಣ್ಯ ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಆಗಮಿಸಿ ಸತ್ಯಶಂಕರ್ ಭಟ್ ಅವರಿಗೆ ಶುಭ ಹಾರೈಸಿ, ಅವರ ಸಾಧನೆಯನ್ನು ಕೊಂಡಾಡಿದರು.ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್, ನಿರ್ದೇಶಕಿಯರಾದ ಮೇಘಾ ಶಂಕರ್, ಮಹಿಮಾ ಶಂಕರ್, ನಿರ್ದೇಶಕ ಮನಸ್ವಿತ್ ಶಂಕರ್ ಹಾಗೂ ಸುಧನ್ವ ಬಿ. ಅಚಾರ್ಯ ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಸತ್ಯಶಂಕರ್ ಭಟ್ ಅವರ ಜೀವನಗಾಥೆ ‘ದುಡಿದರೆ ದುಃಖವಿಲ್ಲ’ ಎಂಬ ಮಾತಿಗೆ ಹಿಡಿದ ಕನ್ನಡಿಯಂತಿದ್ದು, ಅದೆಷ್ಟೋ ಯುವಕರಿಗೆ ಪ್ರೇರಣೆಯ ಸೆಲೆಯಾಗಿದೆ.