ಕೊಳವೆ ಬಾವಿಗಳಲ್ಲಿ ಅಂತರ್ಜಲ ಇಮ್ಮಡಿ

KannadaprabhaNewsNetwork |  
Published : Oct 23, 2024, 12:30 AM IST
ಹೂವಿನಹಡಗಲಿ ತಾಲೂಕಿನ ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ನಿರ್ಮಾಣಗೊಂಡ ಇಂಗುಗುಂಡಿಯಲ್ಲಿ ನೀರು ಸಂಗ್ರಹವಾಗಿರುವುದು. | Kannada Prabha

ಸಾರಾಂಶ

ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಇಂಗುಗುಂಡಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಇದರಿಂದ ಅಂತರ್ಜಲ ಇಮ್ಮಡಿಯಾಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಮಲೆನಾಡು ಸೆರಗಿನಂಚಿನ ಈ ಪ್ರದೇಶದಲ್ಲಿ ನಿರಂತರವಾಗಿ ಸುರಿಯುವ ಮಳೆಗೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಇಂಗುಗುಂಡಿ (ಟ್ರಂಚ್‌)ಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಇದರಿಂದ ಅಂತರ್ಜಲ ಇಮ್ಮಡಿಯಾಗಿದೆ.

ತಾಲೂಕಿನ ಹ್ಯಾರಡ ಮತ್ತು ಸೋಗಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆ ವತಿಯಿಂದ, ಈಗಾಗಲೇ ನರೇಗಾ ಯೋಜನೆಯಡಿ ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 3 ಸಾವಿರ ಇಂಗು ಗುಂಡಿ (ಟ್ರಂಚ್‌) ಹಾಗೂ ಸೋಗಿ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 2 ಸಾವಿರ ಇಂಗು ಗುಂಡಿ (ಟ್ರಂಚ್‌) ನಿರ್ಮಾಣ ಮಾಡಲಾಗಿದೆ.

4 ಮೀಟರ್‌ ಉದ್ದ, 50 ಸೆ.ಮೀ ಆಳ, 50 ಸೆ.ಮೀ ಅಗಲ (1 ಕ್ಯೂಬಿಕ್‌ ಮೀಟರ್‌) ಪ್ರಮಾಣದಲ್ಲಿರುವ ಈ ಇಂಗುಗುಂಡಿಯಲ್ಲಿ, 1ಸಾವಿರ ಲೀ. ನೀರು ಸಂಗ್ರಹವಾಗುತ್ತಿದೆ. ಅಡೆತಡೆ ಇಲ್ಲದೆ ಮಳೆ ನೀರು ಹರಿದು ಹಳ್ಳ ಕೊಳ್ಳ ಸೇರುತ್ತಿತ್ತು. ಈಗ ಇಂಗು ಗುಂಡಿ ಮಾಡಿರುವ ಕಾರಣ ಕೋಟ್ಯಂತರ ಲೀ.ನಷ್ಟು ನೀರು ಸಂಗ್ರಹವಾಗಿ, ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ.

8 ಸಾವಿರ ಮಾನವ ದಿನ ಸೃಜನೆ

ಹ್ಯಾರಡ ಮತ್ತು ಸೋಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿರುವ, ನರೇಗಾ ಕೂಲಿ ಕಾರ್ಮಿಕರಿಗೆ ಅರಣ್ಯ ಪ್ರದೇಶದಲ್ಲಿನ ಇಂಗುಗುಂಡಿ ಕಾಮಗಾರಿ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಕಾರ್ಮಿಕರ ಕೈಗೆ ಕೆಲಸ ಸಿಕ್ಕಿದೆ. ಹ್ಯಾರಡ ಅರಣ್ಯದಲ್ಲಿ ಇಂಗುಗುಂಡಿ ನಿರ್ಮಾಣಕ್ಕಾಗಿ ₹18.60 ಲಕ್ಷದಲ್ಲಿ 4800 ಮಾನವ ದಿನಗಳ ಸೃಜನೆಯಾಗಿದೆ. ಇದಕ್ಕೆ ₹18.58 ಲಕ್ಷ ಕೂಲಿ ನೀಡಲಾಗಿದೆ. ಸೋಗಿ ಅರಣ್ಯ ಪ್ರದೇಶದಲ್ಲಿನ ಇಂಗುಗುಂಡಿ ನಿರ್ಮಾಣಕ್ಕಾಗಿ ₹11.85 ಲಕ್ಷ ನೀಡಲಾಗಿದ್ದು, 3200 ಮಾನವ ದಿನಗಳ ಸೃಜನೆಯಾಗಿದೆ. ₹11.80 ಲಕ್ಷ ಕೂಲಿ ಮೊತ್ತ ಪಾವತಿಯಾಗಿದೆ.

ಅಂತರ್ಜಲ ಹೆಚ್ಚಳ

ಅರಣ್ಯ ವ್ಯಾಪ್ತಿಯ ಇಳಿಜಾರು ಪ್ರದೇಶದಲ್ಲಿ ಇಂಗುಗುಂಡಿ ನಿರ್ಮಿಸಿದ ಹಿನ್ನೆಲೆಯಲ್ಲಿ, ಅಂತರ್ಜಲ ವೃದ್ಧಿಯಾಗುವ ಜತೆಗೆ, ಮಣ್ಣಿನ ಸವಕಳಿ ತಡೆಗಟ್ಟಲು ಸಹಕಾರಿಯಾಗಿದೆ. ಅರಣ್ಯ ಪ್ರದೇಶದಲ್ಲಿ ನಿರಂತರ ತೇವಾಂಶ ಹೆಚ್ಚಳವಾಗುತ್ತಿದೆ. ನೈಸರ್ಗಿಕವಾಗಿ ಪುನರ್‌ ಉತ್ಪತ್ತಿಯಾಗುತ್ತದೆ. ಕಾಡುಪ್ರಾಣಿಗಳು ನೀರನ್ನು ಅರಸಿ ನಾಡಿನ ಕಡೆಗೆ ಬರುತ್ತಿದ್ದವು, ಇದನ್ನು ತಪ್ಪಿಸಲು ಸಾಮಾಜಿಕ ವಲಯ ಅರಣ್ಯ ಇಲಾಖೆಯು, ನರೇಗಾದಲ್ಲಿ ಕೈಗೊಂಡಿರುವ ಇಂಗುಗುಂಡಿ ಕಾಮಗಾರಿಯಿಂದ, ನೀರು ಸಂಗ್ರಹವಾಗುತ್ತಿದ್ದು ಕಾಡು

ಪ್ರಾಣಿಗಳ ನೀರಿನ ದಾಹ ಇಂಗಿಸಿದೆ.

ಇಂಗುಗುಂಡಿಯ ಪಕ್ಕದ ಬಂಡ್‌ಗಳಲ್ಲಿ ಗಿಡ ಮರಗಳು ಬೆಳೆಯುವ ಜತೆಗೆ, ಸಾಮಾಜಿಕ ವಲಯ ಅರಣ್ಯ ಪ್ರದೇಶದಿಂದ ನಾನಾ ಬಗೆಯ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ. ತೇವಾಂಶ ಹೆಚ್ಚಳ

ಮನರೇಗಾ ಯೋಜನೆಯಲ್ಲಿ ಹ್ಯಾರಡ, ಸೋಗಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ, ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಇಂಗುಗುಂಡಿ ನಿರ್ಮಾಣ ಮಾಡಲಾಗಿದೆ. ಅಂತರ್ಜಲ ಹೆಚ್ಚಳ, ಮಣ್ಣಿನ ಸವಕಳಿ, ಗಿಡ ಮರಗಳಿಗೆ ತೇವಾಂಶ ಹೆಚ್ಚಳವಾಗುವ ಜತೆಗೆಯ ಕಾಡು ಪ್ರಾಣಿಗಳ ನೀರಿನ ದಾಹ ಇಂಗಿಸಿದೆ.

- ಕಿರಣ್‌ಕುಮಾರ ಕಲ್ಲಮ್ಮನವರ

ಸಾಮಾಜಿಕ ವಲಯ ಅರಣ್ಯಾಧಿಕಾರಿ, ಹೂವಿನಹಡಗಲಿ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ