ಕಿಮ್ಸ್‌ ಇನ್ಮುಂದೆ ಕೆಎಂಸಿಆರ್‌ಐ

KannadaprabhaNewsNetwork |  
Published : Sep 01, 2024, 01:52 AM IST
ಡಾ. ಎಸ್‌.ಎಫ್‌. ಕಮ್ಮಾರ | Kannada Prabha

ಸಾರಾಂಶ

ಕಿಮ್ಸ್ ಹೆಸರು ಬದಲು ಕೆಎಂಸಿಆರ್‌ಐ ಹೆಸರು ಮರು ನಾಮಕರಣ ಮಾಡುವುದರಿಂದ ಸರ್ಕಾರಕ್ಕೆ ತೆರಿಗೆ ಸೌಲಭ್ಯ ಸಿಗಲಿದೆ. ಜರ್ಮನಿಯಂತಹ ದೇಶಗಳಿಂದ ಆಸ್ಪತ್ರೆಗೆ ಬೇಕಾದ ಯಂತ್ರೋಪಕರಣ ತರಿಸುವುದರಿಂದ ಕಸ್ಟಮ್ ಡ್ಯೂಟಿಗೆ ವಿನಾಯಿತಿ ಸಿಗಲಿದೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕ ಭಾಗದಲ್ಲಿಯೇ ಜೀವದಾಯಿಯಾಗಿ ಹೆಗ್ಗಳಿಕೆ ಹೊಂದಿರುವ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ಇನ್ಮುಂದೆ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ(ಕೆಎಂಸಿಆರ್‌ಐ) ಎಂದು ಮರು ನಾಮಕರಣಗೊಳ್ಳಲಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ. 6ರಂದು ಕೆಎಂಸಿ ಸಂಸ್ಥಾಪನಾ ದಿನಾಚರಣೆ ದಿನದಂದು ಕಿಮ್ಸ್ ಬದಲಾಗಿ ಕೆಎಂಸಿಆರ್‌ಐ ಎಂದು ಮರುನಾಮಕರಣಗೊಳ್ಳಲಿದೆ. ಕಿಮ್ಸ್ ಉತ್ತರ ಕರ್ನಾಟಕ ಭಾಗದಲ್ಲಿಯೇ ಗುಣಮಟ್ಟದ ಚಿಕಿತ್ಸೆಗಾಗಿ ಹೆಸರು ಗಳಿಸಿರುವ ಆಸ್ಪತ್ರೆಯು 1957ರಲ್ಲಿ ಆರಂಭಗೊಂಡಿತ್ತು. ಆರಂಭದಲ್ಲಿ ಇದಕ್ಕೆ ಕರ್ನಾಟಕ ವೈದ್ಯಕೀಯ ಕಾಲೇಜು (ಕೆಎಂಸಿ) ಎಂಬ ಹೆಸರಿತ್ತು. ಆದರೆ, 1997ರಲ್ಲಿ ಇದನ್ನು ಸ್ವಾಯತ್ತ ಸಂಸ್ಥೆಯ ಸ್ಥಾನಮಾನ ನೀಡಿ ಕಿಮ್ಸ್ ಎಂದು ಮರು ನಾಮಕರಣ ಮಾಡಲಾಯಿತು. ಈಗ ಮತ್ತೆ ಸರ್ಕಾರ ಕಿಮ್ಸ್ ಹೆಸರು ಬದಲಾಯಿಸಿ ಕೆಎಂಸಿಆರ್‌ಐ ಆಗಿ ಮರು ನಾಮಕರಣ ಮಾಡಿದೆ ಎಂದರು.

ಕಿಮ್ಸ್ ಹೆಸರು ಬದಲು ಕೆಎಂಸಿಆರ್‌ಐ ಹೆಸರು ಮರು ನಾಮಕರಣ ಮಾಡುವುದರಿಂದ ಸರ್ಕಾರಕ್ಕೆ ತೆರಿಗೆ ಸೌಲಭ್ಯ ಸಿಗಲಿದೆ. ಜರ್ಮನಿಯಂತಹ ದೇಶಗಳಿಂದ ಆಸ್ಪತ್ರೆಗೆ ಬೇಕಾದ ಯಂತ್ರೋಪಕರಣ ತರಿಸುವುದರಿಂದ ಕಸ್ಟಮ್ ಡ್ಯೂಟಿಗೆ ವಿನಾಯಿತಿ ಸಿಗಲಿದೆ. ಆ ಉದ್ದೇಶದಿಂದ ಕೆಎಂಸಿಆರ್‌ಐ ಆಗಿ ನಾಮಕರಣ ಮಾಡಲಾಗುತ್ತದೆ ಎಂದು ತಾಂತ್ರಿಕವಾಗಿ ವಿವರಿಸಿದರು.

ಸಂಸ್ಥಾಪನಾ ದಿನಾಚರಣೆ ಮತ್ತು ಮರು ನಾಮಕರಣ ಕಾರ್ಯಕ್ರಮವನ್ನು ಸೆ. 6ರಂದು ಅದ್ಧೂರಿಯಾಗಿ ಆಯೋಜಿಸುವ ಜತೆಗೆ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ. 31ರಂದು ಪತ್ರಿಕರ್ತರ ಮತ್ತು ಅವರ ಕುಟುಂಬಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಅಲ್ಲದೇ ರೋಗಿಗಳ ಕಡೆಯವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕಿಮ್ಸ್ ಆವರಣದಲ್ಲಿ ಎರಡನೇ ಸುಲಭ ಶೌಚಾಲಯ, ಬಿಸಿ ನೀರಿನ ಸ್ನಾನಗೃಹ ಉದ್ಘಾಟಿಸಲಾಗಿದೆ. ಸೆ. 1ರಂದು ಬೆಳಗ್ಗೆ 6ಕ್ಕೆ ಆರೋಗ್ಯದ ಬಗ್ಗೆ ಸಾಮಾಜಿಕ ಅರಿವು ಮೂಡಿಸುವ ಸಲುವಾಗಿ ಕಿಮ್ಸ್ ಆವರಣದಿಂದ ತೋಳನಕೆರೆ ವರೆಗೆ ವಾಕಾಥಾನ್ ನಡೆಯಲಿದ್ದು, ಹಿರಿಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ಐಎಂಎ ಸದಸ್ಯರು ಭಾಗವಹಿಸಲಿದ್ದಾರೆ. ಸೆ. 2ರಂದು ಬೀದಿ ನಾಟಕ, ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅಲ್ಲಲ್ಲಿ ಬೀದಿ ನಾಟಕ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಸೆ. 3ರಂದು ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗ ಚೇತನರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ. ಸೆ. 4ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕಳೆದ ಬಾರಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ 468 ಯುನಿಟ್‌ ರಕ್ತ ಸಂಗ್ರಹವಾಗಿತ್ತು. ಈ ಬಾರಿ 500 ಯುನಿಟ್‌ಗಳ ಗುರಿ ಹೊಂದಲಾಗಿದ್ದು, 1000 ಯುನಿಟ್‌ಗೂ ಅಧಿಕ ರಕ್ತ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಸೆ. 5ರಂದು ಗುರುಪೌರ್ಣಿಮೆಯ ಅಂಗವಾಗಿ ನಮ್ಮ ಸಿಬ್ಬಂದಿ ಹಾಗೂ ಕೆಎಂಸಿ ಗೋಲ್ಡನ್ ಜುಬ್ಲಿ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ವಿಷಯಗಳ ಕುರಿತು ತಜ್ಞ ವೈದ್ಯರು ಉಪನ್ಯಾಸ ನೀಡಲಿದ್ದಾರೆ. ಬಳಿಕ ಹಿರಿಯ ವೈದ್ಯರು ಮತ್ತು ಹಲವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಗುವುದು ಎಂದು ಕಮ್ಮಾರ ಮಾಹಿತಿ ನೀಡಿದರು.

ಸೆ. 6ರಂದು ಬೆಳಗ್ಗೆ 10.30ಕ್ಕೆ ಕೆಎಂಸಿಆರ್‌ಐ ಆಡಿಟೋರಿಯಂನಲ್ಲಿ ಅದ್ಧೂರಿ ಸಂಸ್ಥಾಪನಾ ದಿನಾಚರಣೆ ಆಯೋಜಿಸಲಾಗಿದ್ದು, ಕೇಂದ್ರಸ ಸಚಿವ ಪ್ರಹ್ಲಾದ ಜೋಶಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ವಿಪ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ, ಮುಖ್ಯ ಆಡಳಿತಾಧಿಕಾರಿ ರಮೇಶ ಕಳಸದ, ಡಾ. ರಾಜಶೇಖರ ದ್ಯಾಬೇರಿ, ಡಾ. ಲಕ್ಷ್ಮೀಕಾಂತ ಸೇರಿದಂತೆ ಹಲವರಿದ್ದರು.ದೇಶಕ್ಕೆ 3ನೇ ಸ್ಥಾನ:

ಎಂಡಿಎಂಎಸ್ ಪರೀಕ್ಷೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯೋಜಿಸುವ ಪ್ರವೇಶ ಪರೀಕ್ಷೆಯಲ್ಲಿ ಕಿಮ್ಸ್ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿ ಸಾಯಿಕುಮಾರ ಸಾಧುನವರ ದೇಶಕ್ಕೆ 3ನೇ ಸ್ಥಾನ ಹಾಗೂ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಹಾಗೆಯೇ ಕಿಮ್ಸ್‌ನ ಮತ್ತೊಬ್ಬ ವಿದ್ಯಾರ್ಥಿ ಅರ್ಪಿತ್ ಭಟ್ಟ ದೇಶಕ್ಕೆ 36ನೇ ಸ್ಥಾನ ಪಡೆದು ಕಿಮ್ಸ್‌ನ ಕೀರ್ತಿ ಹೆಚ್ಚಿಸಿರುವುದು ಸಂತಸ ತಂದಿದೆ ಎಂದು ಕಿಮ್ಸ್‌ನ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ