ಕನ್ನಡಪ್ರಭ ವಾರ್ತೆ ರಾಯಚೂರು
ಮೊದಲಿನಿಂದಲೂ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷ ಒಂದಾಗಿದ್ದವು. ಇದೀಗ ಅದು ಬಹಿರಂಗಪಡಿಸಿಗೊಂಡಿದೆ ಎಂದು ಪೌರಾಡಳಿತ ಸಚಿವ ಎಂ.ಎ.ರಹೀಮ್ ಖಾನ್ ಟೀಕಿಸಿದರು.
ನಗರ ಪ್ರವಾಸ ಕೈಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಕೆಲಸವಿಲ್ಲದ ಬಿಜೆಪಿ-ಜೆಡಿಎಸ್ ಮಂಡ್ಯದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ತಿವಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಅಚ್ಛೇ ದಿನ್ ಆಯೇಗಾ ಎಂದು ಹೇಳುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಜಾರಿಗೊಳಿಸಿದ ಐದು ಗ್ಯಾರಂಟಿ ಬಗ್ಗೆ ಅನೇಕ ರೀತಿಯಲ್ಲಿ ಬಿಜೆಪಿ ಆರೋಪಗಳನ್ನು ಮಾಡಿದರು. ಆದರೂ ರಾಜ್ಯ ಸರ್ಕಾರ ಮಾತ್ರ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಚುನಾವಣೆಯಲ್ಲಿ ಜನರು ಅವರನ್ನು ಸೋಲಿಸಿ ವಿರೊಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಇದೀಗ ಅದನ್ನು ಸಹ ಸರಿಯಾಗಿ ನಿಭಾಯಿಸ ಬಿಜೆಪಿಗರು ಕೋಮು ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸಮೀಪಿಸುತ್ತಿರುವ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮಾಜಗಳ ನಡುವೆ ದ್ವೇಷ ಹುಟ್ಟಿಸಿ ಮತ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ದೇಶದ ಜನರು ಸಾಕಷ್ಟು ಬುದ್ಧಿವಂತರಿದ್ದು ಅಭಿವೃದ್ಧಿ ಪರವಾಗಿರುವವರಿಗೆ ಬೆಂಬಲ ನೀಡಲಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇಂದ್ರ ಬಿಜೆಪಿ ಸರ್ಕಾರ ಮಲತಾಯಿ ಧೋರಣೆಯನ್ನು ತೋರುತ್ತಲೆ ಬಂದಿದೆ. ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರು ಅಗತ್ಯ ಪರಿಹಾರ ಮಂಜೂರು ಮಾಡಿಲ್ಲ. ಅಷ್ಟೇ ಅಲ್ಲದೇ ರಾಜ್ಯದ ಪಾಲಿನ ತೆರಿಗೆ ಹಣವನ್ನು ಸಹ ಮರಳಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಇದರ ವಿರುದ್ಧ ಕಾಂಗ್ರೆಸ್ ದೆಹಲಿಯಲ್ಲಿ ಹೋರಾಟ ನಡೆಸಲಿದೆ ಎಂದರು.