ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಅಟಲ್‌ಜಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ನಡೆದ 2083ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ವ್ಯಸನಮುಕ್ತ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಮತ್ತಷ್ಟು ಬಲ ತುಂಬಿತು.
ಶಿಬಿರದಲ್ಲಿ ಭಾಗವಹಿಸಿದ್ದ 76 ವ್ಯಸನಿಗಳು ಮದ್ಯ ತ್ಯಜಿಸಿ ಹೊಸ ಬದುಕು ಆರಂಭಿಸುವ ಪ್ರತಿಜ್ಞೆ ಕೈಗೊಂಡರು. ಇದು ಕೇವಲ ಒಂದು ಶಿಬಿರದ ಯಶಸ್ಸಲ್ಲ, 76 ಕುಟುಂಬಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದ ಸಾಮಾಜಿಕ ಪರಿವರ್ತನೆಯ ಕ್ಷಣವಾಗಿತ್ತು.ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ನಿಡಶೇಸಿಯ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಇಂದಿನ ಯುವಕರೇ ದೇಶದ ಭವಿಷ್ಯ. ಮದ್ಯ ಹಾಗೂ ಇತರ ವ್ಯಸನಗಳಿಂದ ದೂರ ಉಳಿದಾಗ ಮಾತ್ರ ಆರೋಗ್ಯವಂತ, ಸದೃಢ ಮತ್ತು ಸಂಸ್ಕಾರಯುತ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಡಾ. ಡಿ. ವೀರೇಂದ್ರ ಹೆಗ್ಗಡೆ ಪರಿಕಲ್ಪನೆಯಲ್ಲಿ ಆರಂಭವಾದ ಮದ್ಯವರ್ಜನ ಶಿಬಿರ ಸಾಮಾಜಿಕ ಚಳವಳಿಯಾಗಿ ಬೆಳೆದಿವೆ. ವ್ಯಸನದಿಂದ ಕುಸಿದ ಬದುಕುಗಳಿಗೆ ಹೊಸ ದಿಕ್ಕು ತೋರಿಸುವ ಈ ಶಿಬಿರಗಳು ಸಾವಿರಾರು ಕುಟುಂಬಗಳ ಬದುಕಿನಲ್ಲಿ ಆಶಾಕಿರಣ ಮೂಡಿಸಿವೆ.
ಸಮಾಜಸೇವಕ ರವಿಕುಮಾರ ಹಿರೇಮಠ ಮಾತನಾಡಿ, ಮದ್ಯಪಾನ ಆರೋಗ್ಯ, ಆರ್ಥಿಕ ಸ್ಥಿರತೆ, ಕುಟುಂಬದ ನೆಮ್ಮದಿ ಕಸಿದುಕೊಳ್ಳುವ ದೊಡ್ಡ ಪಿಡುಗಾಗಿದೆ. ಮದ್ಯವ್ಯಸನಿಗಳಲ್ಲಿ ಮನಪರಿವರ್ತನೆ ತಂದು ಸಮಾಜದ ಮುಖ್ಯವಾಹಿನಿಗೆ ಕರೆ ತರುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ರೆಹಮಾನಸಾಬ್ ದೊಡ್ಡಮನಿ, ಬಸವಂತಪ್ಪ ಗದ್ದಿ, ಬಸವರಾಜ ನಾಲತವಾಡ, ಮಂಜುನಾಥ, ನಿರಂಜನ, ವೀರೇಶ ಬಂಗಾರಶೆಟ್ಟರ್, ಮಹಾಂತೇಶ್, ವಿ.ವಿ. ಹಿರೇಮಠ, ರಮೇಶ್ ಕುಲಕರ್ಣಿ, ಪತ್ರಕರ್ತರ ಸಂಘದ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ಶರಣಪ್ಪ ಲೈನದ್, ಮೈಲಾರಪ್ಪ ಮಂತ್ರಿ, ಶರಣಪ್ಪ ತೊಂಡಿಹಾಳ, ಶರಣಪ್ಪ ಭತ್ತದ, ಪ್ರಕಾಶ ಗೋಗೆರಿ, ಶರಣಪ್ಪ ದುಗಲದ್, ಮಂಜುನಾಥ ನರೆಗಲ್, ರಾಮಣ್ಣ ಬಡಿಗೇರ, ಹಳ್ಳಪ್ಪ ವಾಲ್ಮೀಕಿ, ಬಾಳಪ್ಪ ಅಗಸಿಮುಂದಿನ, ಅಯ್ಯಪ್ಪ ಕಲ್ಗೂಡಿ, ಶರಣಪ್ಪ ಹಾವರಗಿ, ಶರಣಪ್ಪ ಮಲಕಪ್ಪ, ಪರಿಮಳಾ ಶೆಟ್ಟಿ, ರಿಹಾನ್, ಅರುಣ್, ಮಹೇಶ್, ಶರಣಪ್ಪ, ನವೀನ್, ಗಣೇಶ್, ಪ್ರಕಾಶ್, ರಾಘವೇಂದ್ರ, ಚಿದಾನಂದ, ಶಿವಾನಂದ, ಮಂಜುಳಾ, ದೀಪಿಕಾ, ಸಂಗೀತಾ, ಅಕ್ಕಮ್ಮ, ನಂದಾ, ರೂಪಾ, ಚಳಗೇರಾ ವಲಯದ ಸೇವಾ ಪ್ರತಿನಿಧಿ, ಒಕ್ಕೂಟದ ಪದಾಧಿಕಾರಿ, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.