ಶಿವಮೊಗ್ಗ: ನಗರದ ನವುಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಆಯೋಜಿಸಿರುವ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರಮೇಳದ ಎರಡನೇ ದಿನ ಭಾನುವಾರ ಗ್ರಾಹಕರ ಕಣ್ಮನ ಸೆಳೆಯಿತು. ಭಾನುವಾರ ರಜೆ ದಿನವಾಗಿರುವ ಕಾರಣ ಹಣ್ಣುಗಳು ಮತ್ತು ಆಹಾರಮೇಳದತ್ತ ಜನರು ಜಮಾಯಿಸಿದ್ದರು.
ಮೇಳದಲ್ಲಿ 150ಕ್ಕೂ ಹೆಚ್ಚಿನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ, ರುಚಿಕರ ಹಣ್ಣು ಹಾಗೂ ರೈತರಿಗೆ, ಸ್ವಸಹಾಯ ಗುಂಪುಗಳಿಗೆ, ಉದ್ದಿಮೆದಾರರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ.ಮುಖ್ಯವಾಗಿ ಈ ಮೇಳವು ರೈತರು, ವ್ಯಾಪಾರಿಗಳು, ರಫ್ತುದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಇನ್ನಿತರ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಆಗಲು, ಸಂಪರ್ಕ ಹೊಂದಲು ಒಳ್ಳೆಯ ವೇದಿಕೆಯಾಗಿದೆ.
ಅಲ್ಲದೆ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಆವರಣದ ಪ್ರಾತ್ಯಕ್ಷಿಕೆಯ ತಾಕುಗಳಾದ ಸಮಗ್ರ ಕೃಷಿ ಪದ್ಧತಿ, ಜೇನು ಸಾಕಾಣಿಕೆ ಘಟಕ, ಕುರಿ ಮತ್ತು ಕೋಳಿ ಸಾಕಾಣಿಕೆ ಘಟಕ, ಜಲ ಕೃಷಿ (ಹೈಡೋಫೋನಿಕ್ಸ್), ಎರೆಹುಳು ಗೊಬ್ಬರ ತಯಾರಿಕೆ ಘಟಕ, ಕೊಳವೆ ಬಾವಿ ಜಲ ಮರುಪೂರಣ ಮಾದರಿ, ತಾರಸಿ ತೋಟ, ಅಲಂಕಾರಿಕ ಮೀನು ಘಟಕಗಳನ್ನು ಜನರು ಸಂದರ್ಶಿಸುತ್ತಿದ್ದರು.ಹಣ್ಣು ಪ್ರಿಯರಿಗಾಗಿ ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣಿನ 30 ವಿಶಿಷ್ಟ ಮಾವಿನ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಕೇಸರ್, ಮಲಗೋವಾ, ಮಲ್ಲಿಕಾ, ನೀಲಂ, ರಸಪುರಿ, ಸಿಂಧೂರ, ತೋತಾಪುರಿ, ಅಪ್ಪೆ ಮಿಡಿ ತಳಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, 20 ವಿವಿಧ ಹಲಸಿನ ತಳಿಗಳಾದ ಸಿದ್ದು ಹಲಸು, ಶಂಕರ, ಸರ್ವಋತು, ರುದ್ರಾಕ್ಷಿ. ಕೆಂಪು, ಚಂದ್ರ ಹಲಸು, ಹೆಬ್ಬಾಳ ಸೇರಿದಂತೆ ಸಖರಾಯಪಟ್ಟಣದ ಸ್ಥಳೀಯ ವಿಶೇಷ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ವಿವಿಧ ತಳಿಯ ಬಾಳೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಮಾಡಲಾಗುತ್ತಿದೆ.ಬಿಜಾಪುರ, ಬಾಗಲಕೋಟೆ ಮತ್ತಿತರ ಭಾಗಗಳಿಂದ ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್ ಇತ್ಯಾದಿ ತಳಿಯ ರುಚಿಕರ ದ್ರಾಕ್ಷಿ ಹಣ್ಣುಗಳು, ಬೆಂಗಳೂರು ಗ್ರಾಮಾಂತರ ಭಾಗದಿಂದ ಬೆಂಗಳೂರು ಬ್ಲೂ ದ್ರಾಕ್ಷಿ ಹೀಗಾಗಿ ದ್ರಾಕ್ಷಿ ಪ್ರಿಯರಿಗೆ ಬಗೆ ಬಗೆಯ ತಳಿಯ ಹಣ್ಣುಗಳು ಮೇಳದಲ್ಲಿ ಇವೆ.
ಅಲ್ಲದೆ, ಗೆಡ್ಡೆ-ಗೆಣಸು ತಳಿಗಳ ಪ್ರದರ್ಶನ ಹಾಗೂ ಬೇಲದ ಹಣ್ಣು, ಅಂಜೂರ ಹಣ್ಣು, ಬಿಜಾಪುರದ ನಿಂಬೆ ಹಣ್ಣು, ಮತ್ತು ಇವುಗಳ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ ಮತ್ತು ರೈತರು ತಾವೇ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.ವಿಶಿಷ್ಟ ಖಾದ್ಯಗಳು:
ಮಲೆನಾಡಿನ ವಿಶಿಷ್ಟ ಸಿಹಿ ಖಾದ್ಯಗಳಾದ ತೊಡೆದೇವು, ಅಪ್ಪೆಮಿಡಿ, ಹಲಸು, ಬಾಳೆ, ಅನಾನಸ್, ಅಂಜೂರ, ಗೇರು, ಮುರುಗಲು, ಪುನರ್ಪುಳಿ ಇತ್ಯಾದಿಗಳ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ಸ್ಥಳೀಯ ವಿಶಿಷ್ಟ ಖಾದ್ಯಗಳು, ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಈ ಮೇಳದ ಅಂಗವಾಗಿ ಬೇಸಿಗೆಯ ಸವಿರುಚಿಗಳಾದ ದಾವಣಗೆರೆ ಬೆಣ್ಣೆದೋಸೆ, ಹುಬ್ಬಳ್ಳಿ ಮಿರ್ಚಿ ಮಂಡಕ್ಕಿ, ಆಲೂ ಟ್ವಿಸ್ಟರ್ ಇತ್ಯಾದಿ ಖಾದ್ಯಗಳು ಈ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.8 ಲಕ್ಷ ಸಸಿಗಳು ಲಭ್ಯ :
ಕರಿಮೆಣಸು, ಕೋಕಂ, ಏಲಕ್ಕಿ, ದಾಲ್ಚಿನಿ, ಬಿದಿರು, ಕಾಫಿ, ಪುನರ್ಪುಳಿ, ಗೋಡಂಬಿ ಸೇರಿದಂತೆ ವಿವಿಧ ತಳಿಯ 8 ಲಕ್ಷ ಸಸಿಗಳು ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ. ಹಣ್ಣುಗಳ ಉತ್ಪನ್ನಗಳಾದ ಜ್ಯೂಸ್, ಜ್ಯಾಮ್, ಜೇನು, ಇತರೆ ಉತ್ಪನ್ನಗಳು, ಸಿರಿಧಾನ್ಯದ ತೊಡೆದೇವು ಈ ರೀತಿಯ ಖಾದ್ಯಗಳು ಲಭ್ಯವಿದ್ದು, ಸಾರ್ವಜನಿಕರು ಕೊಂಡುಕೊಳ್ಳುತ್ತಿದ್ದರು.