ಸೋಮರಡ್ಡಿ ಅಳವಂಡಿ ಕೊಪ್ಪಳ
ಇಂತಹ ಬಡತನದ ಬೇಗೆಯಲ್ಲಿ ಬೇಯುತ್ತಲೇ ಸೌಜನ್ಯಾ ಹನುಮಂತಪ್ಪ ಹೂವಿನಗೋಳ ನಗರದ ಕಾಳಿದಾಸ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. 625 ಅಂಕಗಳಿಗೆ 595 ಅಂಕ ಪಡೆದು ಶೇ. 95ರಷ್ಟು ಸಾಧನೆ ಮಾಡಿದ್ದಾಳೆ.
ನೂರಡಿ ಅಗಲವಿಲ್ಲದ ತಗಡಿನ ಶೆಡ್ಡು. ಅದು ಸಹ ಬಾಡಿಗೆ ಮನೆ. ಕಳೆದ ಹದಿನೆಂಟು ವರ್ಷಗಳಿಂದ ಅದೇ ಶೆಡ್ಡಿನಲ್ಲಿಯೇ ಇದ್ದಾರೆ. ಅದರಲ್ಲಿಯೇ ಮಲಗಬೇಕು. ಅದರಲ್ಲಿಯೇ ಅಡುಗೆ ಮಾಡಿಕೊಳ್ಳಬೇಕು. ಇವರಿಗೆಲ್ಲ ಸಾರ್ವಜನಿಕ ಶೌಚಾಲಯಗಳೇ ಆಸರೆ. ಹೀಗಾಗಿ, ಅವರು ಶೌಚಕ್ಕೂ ಹೋಗುವುದು ಅಪರೂಪ. ಅದೊಂದೆ ತಗಡಿನ ಕೊಠಡಿಯಲ್ಲಿಯೇ ಎಲ್ಲರೂ ಮಲಗಬೇಕು.ಹನುಮಂತಪ್ಪ ಹೂವಿನಗೋಳ ಅವರಿಗೆ ನಾಲ್ವರು ಹೆಣ್ಣುಮಕ್ಕಳು. ಸ್ವಂತಕ್ಕೆ ಮನೆಯೂ ಇಲ್ಲ. ಗುಂಟೆ ಭೂಮಿಯೂ ಇಲ್ಲ. ನಿತ್ಯವೂ ದುಡಿದು ತಂದರೆ ಊಟ, ಇಲ್ಲದಿದ್ದರೆ ಉಪವಾಸ. ಆದರೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂದು ತಂದೆ, ತಾಯಿ ಇಬ್ಬರು ಹಗಲಿರಳು ದುಡಿಯುತ್ತಿದ್ದಾರೆ.
ಸೌಜನ್ಯ ಕೂಡಾ ದೊಡ್ಡ ಕನಸು ಹೊಂದಿದ್ದರೂ ಅಪ್ಪ, ಅಮ್ಮನಿಗೆ ಹೊರೆಯಾಗುವ ಮನಸ್ಸು ಇಲ್ಲ. ಹೀಗಾಗಿ, ಈಗ ಈಕೆಯ ಮುಂದಿನ ಓದಿಗೆ ನೆರವು ಬೇಕಾಗಿದೆ. ನೆರವು ಸಿಕ್ಕರೆ ಮಾತ್ರ ಆಕೆಯ ಮುಂದಿನ ಓದು ಸುಸೂತ್ರವಾಗುತ್ತದೆ. ಇಲ್ಲದಿದ್ದರೆ ಇಲ್ಲ ಎನ್ನುವಂತಾಗಿದೆ.
ನಿಜಕ್ಕೂ ಅವರ ಮನೆ ಬಡತನ ನೋಡಿದರೆ ಕಣ್ಣೀರು ಬರುತ್ತದೆ. ಮಲಗಲು ಜಾಗ ಬಿಟ್ಟರೆ ಶೌಚಕ್ಕೆ ಸಾರ್ವಜನಿಕ ಶೌಚಾಲಯಕ್ಕೆ ಹೋಗಬೇಕು. ಅಂತಹ ಬಡತನದ ಬೇಗೆಯಲ್ಲಿ ನಮ್ಮ ಶಾಲೆಗೆ ಟಾಪರ್ ಬಂದಿದ್ದಾಳೆ. ಆಕೆಗೆ ಸೂಕ್ತ ನೆರವು ಬೇಕು ಎಂದು ಕೊಪ್ಪಳ ಕಾಳಿದಾಸ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಮಣ್ಣ ಡಿ ತಿಳಿಸಿದ್ದಾರೆ.
ಫಲಿತಾಂಶ ಚೆನ್ನಾಗಿ ಬಂದಿರುವುದಕ್ಕೆ ಖುಷಿಯಾಗಿದೆ. ಆದರೆ, ಮುಂದೆ ಪಿಯುಸಿ ಸೈನ್ಸ್ ಮಾಡುವ ಬಯಕೆ ಇದೆಯಾದರೂ ಮನೆಯಲ್ಲಿ ಆರ್ಥಿಕ ಸಮಸ್ಯೆಯಿದೆ. ಆದರೂ ನಮ್ಮ ತಂದೆ ಓದಿಸಿಯೇ ಓದಿಸುತ್ತೇನೆ ಎನ್ನುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಸೌಜನ್ಯಾ ಹೇಳಿದ್ದಾರೆ.