ವಿಠ್ಠಪ್ಪ ಗೋರಂಟ್ಲಿ 3ನೇ ಪುಣ್ಯಸ್ಮರಣೋತ್ಸವದಲ್ಲಿ ಸಾಹಿತಿ
ಕನ್ನಡಪ್ರಭ ವಾರ್ತೆ ಕೊಪ್ಪಳಗುರುವಿನ ಗುಲಾಮನಾಗುವ ತನಕ ದೊರಕದಯ್ಯ ಮುಕುತಿ ಎಂಬ ಅನುಭವಿಕರ ಮಾತು ಎಷ್ಟು ನಿಜ, ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ. ಅಂದಾಗಲೇ ಮಾನವನ ಜೀವನ ರೂಪುಗೊಂಡು ಅದಕ್ಕೆ ಸಾರ್ಥಕತೆ ದೊರುವುದು ಎಂದು ಹಿರಿಯ ಸಾಹಿತಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಎಸ್. ಗೋನಾಳ ಅಭಿಪ್ರಾಯಪಟ್ಟರು.
ಭಾಗ್ಯನಗರದ ಸದಾನಂದ ಜ್ಞಾನ ಯೋಗಾಶ್ರಮದಲ್ಲಿ ಹಮ್ಮಿಕೊಂಡ ವಿಠ್ಠಪ್ಪ ಗೋರಂಟ್ಲಿ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ಬಾಲ್ಯದಿಂದ ತನ್ನ ಜೀವನದ ಕಟ್ಟಕಡೆಯ ಅವಧಿಯವರೆಗೂ ಗುರುವಿನ ಪಾತ್ರ ಮುಖ್ಯ. ವಿದ್ಯಾರ್ಥಿಯ ಬಾಳಿನಲ್ಲಿ ಒಬ್ಬ ಶಿಕ್ಷಕ, ಯೌವ್ವನದಲ್ಲಿ ಕಾಲೇಜಿನ ಪ್ರಾಧ್ಯಾಪಕ ಹೀಗೆ ಹಲವು ಮಜಲುಗುಳಲ್ಲಿ ಒಬ್ಬ ಗುರುವಿನ ಪಾತ್ರ ಇದ್ದೇ ಇರುತ್ತದೆ. ಇದಕ್ಕೆ ನಾನು ಕೂಡಾ ಹೊರತಾಗಿಲ್ಲ. ನಾನು ಪತ್ರಿಕಾ ಹಾಗೂ ಸಾಹಿತ್ಯ ರಂಗದಲ್ಲಿ ಪಾದಾರ್ಪಣೆ ಮಾಡಿದಾಗ, ವಿಠ್ಠಪ್ಪ ಅವರು ನನ್ನ ಬೆನ್ನುತಟ್ಟಿ ಸದಾ ಪ್ರೋತ್ಸಾಹ ನೀಡಿದ ಮಹಾಚೇತನ. ನನ್ನ ಯಶಸ್ಸಿಗೆ ಅವರ ಮಾರ್ಗದರ್ಶನ ಕಾರಣ ಎಂಬುದು ಸತ್ಯ ಎಂದ ಅವರು, ವಿಠ್ಠಪ್ಪ ಜತೆಗಿನ ಒಡನಾಟ ಮೆಲುಕು ಹಾಕಿದರು.ಗುರು ಎನ್ನುವ ಶಬ್ದ ದೊಡ್ಡದು ಎಂಬ ಧಾರ್ಮಿಕ ವಿಷಯದ ಕುರಿತು ಹಿರಿಯ ಸಾಹಿತಿ ಹಾಗೂ ಶರಣ ಚಿಂತಕ ವೀರಣ್ಣ ಹುರಕಡ್ಲಿ ಮಾತನಾಡಿ, ಮಾನವನು ಭವ-ಬಂಧನಗಳನ್ನು ಬಿಡಿಸಿಕೊಳ್ಳಲು, ಅತ್ಯವಶ್ಯಕವಾಗಿ ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ, ಕೃಪೆ ಬೇಕೇಬೇಕು. ಅಂತಃಕರಣದಿಂದ ಪರಿಶುದ್ಧವಾದವರಿಗೆ ಮಾತ್ರ ಗುರುವಿನ ಕೃಪೆ ದೊರಕುತ್ತದೆ. ಆಗ ಮಾತ್ರ ಮಾನವನ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ ದದೇಗಲ್ ಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಗುರುವಚನ ಶ್ರುತಿ ಮತ್ತು ಗುರು ವಚನ ಸ್ಮೃತಿ ಕುರಿತು ವಿವರಿಸಿದರು. ಗುರು ತನ್ನ ಅಂತಃಕರಣದ ಶಕ್ತಿಯ ಮೂಲಕ, ಅಜ್ಞಾನದಿಂದ ಬೆಳಕಿನೆಡೆಗೆ, ಜ್ಞಾನದಿಂದ ಮುಕ್ತಿಯ ಕಡೆಗೆ ದಾರಿ ತೋರಿಸುವ ಮಹಾನ್ ಸದ್ಗುರು. ಗುರುವಿನ ಕೃಪೆಯಾದರೆ ಮಾತ್ರ ಮಾನವನ ಮುಕ್ತಿ ಮಾರ್ಗ ಸಾಧ್ಯ ಎಂದರು.ಇದೇ ಸಂದರ್ಭ ಈರಣ್ಣ ನಂದ್ಯಾಳ ಮತ್ತು ಪತ್ರಕರ್ತ ಶರಣಬಸವ ಕಟ್ಟಿಮನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತವೃಂದ ಪಾಲ್ಗೊಂಡಿತ್ತು. ಧಾರ್ಮಿಕ ಕಾರ್ಯಕ್ರಮಗಳ ಆ ನಂತರ ಅನ್ನಸಂತರ್ಪಣೆ ಜರುಗಿತು. ನಾರಾಯಣಪ್ಪ ಸ್ವಾಗತ ಕೋರಿದರು. ಅಶೋಕ ಗೋರಂಟ್ಲಿ ವಂದಿಸಿದರು.