ಹಾವೇರಿ: ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿರುವ ಹಾನಗಲ್ಲ ತಾಲೂಕಿನ ಶಂಕರ ಬನ್ನೂರು ಅವರ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನಿಖೆಗೆ ಆದೇಶಿಸಿದೆ.
ಬಡ ಕುಟುಂಬದಿಂದ ಬಂದಿರುವ ನಾನು ಹಲವು ಕಷ್ಟಗಳ ನಡುವೆಯೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದೇನೆ. ಈವರೆಗೆ 45ಕ್ಕೂ ಅಧಿಕ ಪರೀಕ್ಷೆಗಳನ್ನು ಬರೆದಿದ್ದು, ಕೆಲವು ಪರೀಕ್ಷೆಗಳಲ್ಲಿ ಸಂದರ್ಶನದ ಹಂತದವರೆಗೂ ತಲುಪಿದ್ದೇನೆ. ಇನ್ನು ಕೆಲವು ಪರೀಕ್ಷೆಗಳಲ್ಲಿ ದೈಹಿಕ ಪರೀಕ್ಷೆಗೂ ಹಾಜರಾಗಿದ್ದೇನೆ. ಹೋಟೆಲ್, ಸಿನಿಮಾ ಮಂದಿರ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಲೇ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದೇನೆ. ವಿಎಒ ಪರೀಕ್ಷೆಯಲ್ಲಿನ ಸಾಧನೆ ಪರಿಶ್ರಮದ ಫಲವೇ ಹೊರತು ಯಾವುದೇ ಅಕ್ರಮದ ಫಲವಲ್ಲ ಎಂದು ಹೇಳಿದರು.
ಪಿಯುಸಿ ದಾಖಲೆ ಬಗ್ಗೆ ಗೊಂದಲ: 2013ರಲ್ಲಿ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ 2026ಕ್ಕೆ ಸಂಬಂಧಿಸಿದಂತೆ ನನ್ನ ಪಿಯುಸಿ ಅಂಕಪಟ್ಟಿ ಅಥವಾ ದಾಖಲೆ ಕಾಣಿಸಿಕೊಂಡಿರುವುದು ಹೇಗೆ? ಎಂಬುದು ತಿಳಿದಿಲ್ಲ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ಪೊಲೀಸರು ಹಾಗೂ ತಹಸೀಲ್ದಾರ್ ವಿಚಾರಣೆಗೆ ಕರೆದಾಗ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದರು.ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದೆ. ಆ ಸಂದರ್ಭದಲ್ಲಿ ಸಹೋದರಿಗೆ ಅಪಘಾತವಾಗಿದ್ದು, ತನಗೂ ಗಾಯವಾಗಿತ್ತು. ಹೀಗಾಗಿ ಪರೀಕ್ಷೆಯನ್ನು ನಿರೀಕ್ಷಿತ ರೀತಿಯಲ್ಲಿ ಬರೆಯಲು ಸಾಧ್ಯವಾಗಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವರು ಅನುಮಾನ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.