ಕೊಪ್ಪಳ: ಮೂಲಭೂತ ಹಕ್ಕು ಮತ್ತು ಕರ್ತವ್ಯ ಸಂವಿಧಾನದ ಎರಡು ಕಣ್ಣುಗಳಿದ್ದಂತೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಅಸಂಖ್ಯಾತ ದೇಶಾಭಿಮಾನಿಗಳ ಹೋರಾಟ,ತ್ಯಾಗ, ಬಲಿದಾನದ ಫಲವಾಗಿ ನಮ್ಮ ದೇಶ 1947 ಆಗಸ್ಟ್ 15 ರಂದು ಬ್ರಿಟೀಷರ ಸಂಕೋಲೆಯಿಂದ ಮುಕ್ತಿ ಹೊಂದಿ ಸ್ವತಂತ್ರ ರಾಷ್ಟ್ರವಾಯಿತು. ಸ್ವಾತಂತ್ರ್ಯದ ಸಂಭ್ರಮದೊಂದಿಗೆ ದೇಶಕ್ಕೆ ಪ್ರತ್ಯೇಕ ಸಂವಿಧಾನ ರಚಿಸುವ ಅಗತ್ಯತೆ ಮನಗಂಡು, ಸಂವಿಧಾನ ರಚನೆಯ ಪ್ರಕ್ರಿಯೆಗಳು ಪ್ರಾರಂಭವಾದವು. ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್.ಅಂಬೇಡ್ಕರ ನೇತೃತ್ವದಲ್ಲಿ ಸಂವಿಧಾನ ರಚನಾ ಕಾರ್ಯಕ್ಕೆ ಚಾಲನೆ ದೊರೆಯಿತು. ಈ ಮಹಾನ್ ಮೇಧಾವಿಗಳ ಸತತ ಅಧ್ಯಯನ, ಚರ್ಚೆಗಳ ಅವಿರತ ಶ್ರಮದ ಫಲವಾಗಿ ಭಾರತ ಸಂವಿಧಾನ ರಚನೆಗೊಂಡು 1950ರ ಜ.26 ರಂದು ಜಾರಿಗೆ ಬಂದಿತು. ಭಾರತ ಗಣರಾಜ್ಯವಾಗಿ, ದೇಶದೊಳಗಿದ್ದ ಎಲ್ಲ ಸಂಸ್ಥಾನಗಳು ವಿಲೀನಗೊಂಡು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಏಕ ಸಂವಿಧಾನದಡಿ ಬೃಹತ್ ಗಣತಂತ್ರ ರಾಷ್ಟ್ರವಾಗಿ ನಮ್ಮ ದೇಶ ಉದಯವಾಯಿತು ಎಂದರು.
ಸೌಲಭ್ಯ ವಿತರಣೆ: ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್ ಹಾಗೂ ಸಾಹಿತಿ,ಕವಿ ಮತ್ತು ಕಲಾವಿದರಿಗೆ ಮಾಸಾಶನ ಮಂಜೂರಾತಿ ಆದೇಶ ಪ್ರತಿಗಳನ್ನು ಸಚಿವರು ವಿತರಣೆ ಮಾಡಿದರು.ಸಾಂಸ್ಕೃತಿಕ ಕಾರ್ಯಕ್ರಮ,ಬಹುಮಾನ ವಿತರಣೆ: ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಮತ್ತು ಕಿಡದಾಳನಲ್ಲಿರುವ ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದು, ಈ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಪಥಸಂಚಲನದಲ್ಲಿ ಭಾಗವಹಿಸಿದ ಇತರೆ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ವೀರಣ್ಣ ಗಡಾದ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್.ಅರಸಿದ್ಧಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಕೊಪ್ಪಳ ತಹಸೀಲ್ದಾರ ವಿಠ್ಠಲ ಚೌಗಲಾ ಮತ್ತು ಇತರೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಮತ್ತು ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.