ಕನ್ನಡಪ್ರಭ ವಾರ್ತೆ ಬೀದರ್
ನಗರ ರಸ್ತೆಗಳ ಬಗ್ಗೆ ಜಿಲ್ಲಾಡಳಿತ ಕ್ಯಾರೆ ಎನ್ನದೇ ಕುಳಿತಿದೆ. ಸಂಚಾರ ಸುಗಮಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗದಿದ್ದರೂ ಸಂಬಂಧಿತ ಇಲಾಖೆಗಳಿಗೆ ಸಲಹೆ ನೀಡಿ ವಾಹನ ಸವಾರ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾದ ಪೊಲೀಸ್ ಇಲಾಖೆ ಸಹ ಮೌನಿಯಾಗಿದ್ದು, ಅಚ್ಚರಿ ಮೂಡಿಸುವಂತಿದೆ. ಇದಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್ ಮೌನವೂ ಕಾರಣವಾಗಿರಬಹುದು ಎಂಬುದು ಜನಾಭಿಪ್ರಾಯ.
ಶಿವನಗರ, ಪ್ರತಾಪನಗರ ಬಳಿಯ ಮುಖ್ಯ ರಸ್ತೆಯಲ್ಲಿ ಗುಂಡಿಗಳಿಂದಲೇ ತುಂಬಿ ಹೋಗಿದ್ದ ರಸ್ತೆಯ ಮೇಲೆ ಕಂಕರ್ ಸುರಿದಿರುವ ಗುತ್ತಿಗೆದಾರರು ಮಳೆಯ ಆಗಮನದಿಂದ ಅಷ್ಟಕ್ಕೆ ಸುಮ್ಮನಾಗಿದ್ದಾರೇನೋ ಎಂಬ ಅನುಮಾನ ಕೂಡ ಇದೆ. ಹೀಗೆಯೇ ಸರಣಿ ವಿಶೇಷ ವರದಿಗಳಿಗೆ ಸಾರ್ವಜನಿಕರೇನಕರು ಕನ್ನಡಪ್ರಭಕ್ಕೆ ಮಾತನಾಡಿ ಪ್ರತಿಕ್ರಿಯಿಸಿ ತಮ್ಮ ಆಕ್ರೋಶ, ಅಸಮಧಾನ ಹಾಗೂ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.
*ಗುಣಮಟ್ಟದ ಕೆಲಸವಾಗಲಿ: ಬೀದರ್ ನಗರದಲ್ಲಿ ನಿರಂತರ ಮಳೆಯಿಂದ ಮುಖ್ಯ ರಸ್ತೆ ಮತ್ತು ಇನ್ನುಳಿದ ರಸ್ತೆಗಳು ಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿವೆ. ಈಗಾಗಲೇ ಗುಂಡಿಗಳನ್ನು ಮುಚ್ಚಲು ತಾತ್ಕಾಲಿಕ ಕೆಲಸ ನಡೆದಿದ್ದು, ಮರು ದಿವಸವೇ ಕಿತ್ತು ಹೋಗುತ್ತಿವೆ. ಆದ್ದರಿಂದ ರಸ್ತೆಗಳು ಗುಣಮಟ್ಟದ ಕೆಲಸ ಆಗಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಸಮಗ್ಅ ಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ ತಿಳಿಸಿದ್ದಾರೆ.