ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ರೈತರು ವರ್ತಕರಿಗೆ ಅನುಕೂಲವಾಗಲೆಂದು ದೊಡ್ಡ ಕೃಷಿ ಮಾರುಕಟ್ಟೆ ಕಟ್ಟಲಾಗಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಐದು ಕೋಟಿ ರು. ವೆಚ್ಚದಲ್ಲಿ ಹದಿನಾರು ನೂತನ ಮಳಿಗೆ, ಎರಡು ಕೋಟಿ ರು. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಮತ್ತು ಸಿ.ಸಿ.ರಸ್ತೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.ಸುಮಾರು ನೂರು ಮೀ. ಎತ್ತರದಲ್ಲಿದ್ದ ಗುಡ್ಡವನ್ನು ಕಡಿದು ಸಮ ಮಾಡಿ ಎಪಿಎಂಸಿಗೆ ಚಾಲನೆ ನೀಡಿ ರೈತರಿಗೆ ಅನುಕೂಲವಾಗಲಿ ಎಂದು ಹೊಸ ಕಟ್ಟಡಗಳನ್ನು ಕಟ್ಟಲಾಗಿದೆ. ಈ ಹಿಂದೆ ರೈತರು ಹೊಸದುರ್ಗಕ್ಕೆ ಹೋಗಬೇಕಿತ್ತು. ಅದನ್ನು ಮನಗಂಡು ಇಲ್ಲಿಯೇ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಊಟ, ತಿಂಡಿ ಹಾಗೂ ಉಳಿದುಕೊಳ್ಳಲು ವಸತಿ ಕಲ್ಪಿಸುವ ಚಿಂತನೆಯಿದೆ ಎಂದು ತಿಳಿಸಿದರು.
ಎ.ಪಿ.ಎಂ.ಸಿ.ಗೆ ಇದುವರೆವಿಗೂ 17.5 ಕೋಟಿ ರು. ಹೆಚ್ಚು ವೆಚ್ಚದಲ್ಲಿ ಮಳಿಗೆಗಳು , ಸುಸಜ್ಜಿತ ರಸ್ತೆ, ಕಚೇರಿ ,ಸೇರಿದಂತೆ ಮತ್ತಿತರರ ಕಾಮಗಾರಿಗಳು ನಡೆದಿವೆ. ಇಂದು ಮತ್ತೆ 5 ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದೆ. ಮಕ್ಕಳ ಶಿಕ್ಷಣಕ್ಕಾಗಿ ಹದಿಮೂರು ಕೋಟಿ ರು.ಗಳಲ್ಲಿ ಎರಡು ಹೊಸ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಲಾಗು ವುದು. ಹತ್ತು ಕೋಟಿ ರು. ವ್ಯಯಿಸಿ ಐ.ಟಿ.ಐ. ಕಾಲೇಜು ಕಟ್ಟಲು ಮುಂದಿನ ವಾರ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.ನನ್ನ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಏನನ್ನು ಹೇಳಿಸಿಕೊಳ್ಳದೆ ಹುಡುಕಿ ಹುಡುಕಿ ಕೆಲಸ ಮಾಡಿದ್ದೇನೆ. ರೈತರು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಿ ಕೊಳ್ಳಬಹುದು ಎನ್ನುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆಗ ವಿರೋಧ ವ್ಯಕ್ತವಾಗಿದ್ದರಿಂದ ಹಿಂದಕ್ಕೆ ಪಡೆದಿದೆ. ಕಳೆದ ಎಪ್ಪತ್ತು ವರ್ಷಗಳಿಂದಲೂ ರೈತರಿಗೆ ಸರಿಯಾದ ಮಾರುಕಟ್ಟೆ ಇರಲಿಲ್ಲ ಎನ್ನುವುದನ್ನು ಗಮನಿಸಿ ಪಟ್ಟಣದ ಹೊರವಲಯದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿದ್ದೇನೆ. ತಾಲ್ಲೂಕಿನ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ವಿನಂತಿಸಿದರು.
ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಅಂಕಳಪ್ಪ, ಕುಮಾರಣ್ಣ, ಮಾಜಿ ಉಪಾಧ್ಯಕ್ಷ ದಾಸಯ್ಯನಹಟ್ಟಿ ರಮೇಶ್, ಸದಸ್ಯ ಮರುಳಸಿದ್ದಪ್ಪ, ಹೊಳಲ್ಕೆರೆ ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಜಿ.ಎಸ್.ಸುರೇಶ್, ಎಪಿಎಂಸಿ ಇಂಜಿನಿ¿åರ್ ಗಳಾದ ಪುಟ್ಟರಾಜು, ರುದ್ರೇಶ್ ನಾಯ್ಕ್ ಪ್ರವೀಣ್, ಮಹೇಶ್ ನಾಯ್ಕ . ಮರುಳುಸಿದ್ದಪ್ಪ ಹಾಗು ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.