ನೀರಿನ ಕೊರತೆ ಎದುರಿಸುವ ಭವಿಷ್ಯದ ಪೀಳಿಗೆ

KannadaprabhaNewsNetwork |  
Published : Feb 14, 2025, 12:46 AM IST
ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಎರಡು ದಿನಗಳ ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಾರ್ಯತಂತ್ರ ಎಂಬ ವಿಷಯದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಡಾ. ಫಿಲಾಟೊವ್ ನಿಕೋಲೈ ನಿಕೊಲಾಯೆವಿಚ್ ಉದ್ಘಾಟಿಸಿದರು. | Kannada Prabha

ಸಾರಾಂಶ

ನೀರು ಜೀವನಕ್ಕೆ ಅತ್ಯಗತ್ಯ. ಆದರೆ, ಹವಾಮಾನ ಬದಲಾವಣೆ, ಮಾಲಿನ್ಯ, ನೀರಿನ ಅತಿಯಾದ ಬಳಕೆ ಮತ್ತು ದುರುಪಯೋಗದಿಂದಾಗಿ ಅದರ ಲಭ್ಯತೆ ಮತ್ತು ಗುಣಮಟ್ಟ ಅಪಾಯದಲ್ಲಿದೆ. ನಾವು ಈಗಲೇ ಕ್ರಮ ಕೈಗೊಳ್ಳದಿದ್ದರೇ ಭವಿಷ್ಯದ ಪೀಳಿಗೆಗಳು ತೀವ್ರ ನೀರಿನ ಕೊರತೆ ಎದುರಿಸಬೇಕಾಗುತ್ತದೆ ಎಂದು ರಷ್ಯನ್ ಅಕಾಡೆಮಿಯ ಪೆಟ್ರೊಜವೋಡ್ಸ್ಕ್ ವಾಟರ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಫಿಲಾಟೊವ್ ನಿಕೋಲೈ ನಿಕೊಲಾಯೆವಿಚ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೀರು ಜೀವನಕ್ಕೆ ಅತ್ಯಗತ್ಯ. ಆದರೆ ಹವಾಮಾನ ಬದಲಾವಣೆ, ಮಾಲಿನ್ಯ, ನೀರಿನ ಅತಿಯಾದ ಬಳಕೆ ಮತ್ತು ದುರುಪಯೋಗದಿಂದಾಗಿ ಅದರ ಲಭ್ಯತೆ ಮತ್ತು ಗುಣಮಟ್ಟ ಅಪಾಯದಲ್ಲಿದೆ. ನಾವು ಈಗಲೇ ಕ್ರಮ ಕೈಗೊಳ್ಳದಿದ್ದರೇ ಭವಿಷ್ಯದ ಪೀಳಿಗೆಗಳು ತೀವ್ರ ನೀರಿನ ಕೊರತೆ ಎದುರಿಸಬೇಕಾಗುತ್ತದೆ ಎಂದು ರಷ್ಯನ್ ಅಕಾಡೆಮಿಯ ಪೆಟ್ರೊಜವೋಡ್ಸ್ಕ್ ವಾಟರ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಫಿಲಾಟೊವ್ ನಿಕೋಲೈ ನಿಕೊಲಾಯೆವಿಚ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಗುರುವಾರ ಎರಡು ದಿನಗಳ ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಾರ್ಯತಂತ್ರ ಎಂಬ ವಿಷಯದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನೀರು ಜೀವನದ ಅಡಿಪಾಯ. ಇದು ಪರಿಸರದಲ್ಲಿನ ವಿವಿಧ ವ್ಯವಸ್ಥೆಗಳನ್ನು ಉಳಿಸುತ್ತದೆ. ಕೃಷಿ ಹಾಗೂ ಕೈಗಾರಿಕೆಗಳಿಗೆ ಅತ್ಯವಶ್ಯ. ಜತೆಗೆ ಮಾನವ ಸಂಕುಲದ ಉಳಿವಿಗೆ ಇದರ ಅಸ್ತಿತ್ವ ನಿರ್ಣಾಯಕ. ಭೂಮಿಯ ಮೇಲ್ಮೈಯಲ್ಲಿ ಶೇ.71ರಷ್ಟು ನೀರಿದ್ದರೂ ಇದರ ಕೇವಲ ಶೇ.2.5 ಮಾತ್ರ ಸಿಹಿನೀರಿದೆ. ಮತ್ತು ಇದಕ್ಕಿಂತ ಕಡಿಮೆ ಭಾಗವು ನೇರ ಮಾನವ ಬಳಕೆಗೆ ಲಭ್ಯವಿದೆ ಎಂದರು.ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಮಾತನಾಡಿ, ಭೂಮಿಯ ಹವಾಮಾನವು ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ಇಂಧನ ಉಪಯೋಗ, ಅರಣ್ಯನಾಶ ಮತ್ತು ಕೈಗಾರೀಕರಣದಂತಹ ಪ್ರಕ್ರಿಯೆ, ಮಾನವ ಚಟುವಟಿಕೆಗಳು ಕಾರಣವಾಗಿವೆ. ಈ ಕ್ರಿಯೆಗಳು ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತವೆ. ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ. ಅಲ್ಲದೆ, ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತವೆ. ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯ ಹೊಂದಾಣಿಕೆಯು ಒಂದಕ್ಕೊಂದು ನೇರ ಸಂಬಂಧ ಹೊಂದಿದೆ ಎಂದರು.ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿ, ಹವಾಮಾನ ಬದಲಾವಣೆಯು ದೂರ ಉಳಿದಿಲ್ಲ. ಅದು ಈಗ ನಡೆದಿದ್ದು, ಅದು ನಿರಂತರವಾಗಿದೆ. ಸಮುದ್ರ ಮಟ್ಟ ಏರಿಕೆ, ಆಮ್ಲ ಮಳೆ, ಜಾಗತಿಕ ತಾಪಮಾನ, ಚಂಡಮಾರುತಗಳು, ಅತಿವೃಷ್ಟಿ, ಅನಾವೃಷ್ಟಿ, ಕಾಡ್ಗಿಚ್ಚುಗಳು ಅದರ ಪರಿಣಾಮಗಳೆಂದರೆ ತಪ್ಪಾಗಲಾರದು. ಈ ಬದಲಾವಣೆಗಳು ನಮ್ಮ ಪರಿಸರ ವ್ಯವಸ್ಥೆ, ಆಹಾರ ಉತ್ಪಾದನೆ, ನೀರಿನ ಲಭ್ಯತೆ ಮತ್ತು ನೇರವಾಗಿ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಆದ್ದರಿಂದ, ಈ ಸಮ್ಮೇಳನದ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಸುಸ್ಥಿರ ಪರಿಹಾರಗಳನ್ನು ತರಲು ನಾವು ಪ್ರಯತ್ನಿಸಬೇಕು ಎಂದು ತಿಳಿಸಿದರು.ವಿಟಿಯು ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು. ಪ್ರೊ.ಚಂದ್ರಶೇಖರ ಹಿರೇಮಠ್ ಅತಿಥಿಗಳನ್ನು ಪರಿಚಯಿಸಿದರು. ಸಮ್ಮೇಳನದ ಸಂಯೋಜಕ ಹಾಗೂ ಸಿವಿಲ್ ವಿಭಾಗದ ಅಧ್ಯಕ್ಷ ಪ್ರೊ.ನಾಗರಾಜ್ ಪಾಟೀಲ್ ವಂದಿಸಿದರು. ಕೆನಡಾದ ಇನ್‌ಲ್ಯಾಂಡ್ ವಾಟರ್ಸ್‌ನ ಮಾಜಿ ಹಿರಿಯ ವಿಜ್ಞಾನಿ ಡಾ.ಸಿ.ಆರ್.ಮೂರ್ತಿ, ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ ಹಾಗೂ ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ್.ಜಿ ಉಪಸ್ಥಿತರಿದ್ದರು.100ಕ್ಕಿಂತ ಹೆಚ್ಚು ತಜ್ಞರು, ಸಂಶೋಧನಾರ್ಥಿಗಳು ಭಾಗಿ

ಎರಡು ದಿನಗಳು ನಡೆಯುವ ಈ ಸಮ್ಮೇಳನದಲ್ಲಿ 68ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ವಿಷಯ ತಜ್ಞರು ಸೇರಿ ಸುಮಾರು 100ಕ್ಕಿಂತ ಹೆಚ್ಚು ತಜ್ಞರು, ಸಂಶೋಧನಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದಾರೆ.ಬೆಳೆಯುತ್ತಿರುವ ಜಾಗತಿಕ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಸುಸ್ಥಿರ ನೀರು ಪೂರೈಕೆ ಒದಗಿಸಿಕೊಡಬೇಕಾಗಿರುವುದು ನಮ್ಮ ಕಾಲದ ಬಹುದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಭವಿಷ್ಯದ ಪೀಳಿಗೆಗೆ ಶುದ್ಧ ಗಾಳಿ, ನಿಸರ್ಗ ಮತ್ತು ಅಗತ್ಯವಾದ ನೀರನ್ನು ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಭವಿಷ್ಯದ ಪೀಳಿಗೆಗೆ ಜಲಮೂಲಗಳನ್ನು ಉಳಿಸಲು ಹವಾಮಾನ ಬದಲಾವಣೆಗೆ ತಕ್ಕಂತೆ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಅದರಲ್ಲೂ ನೀರನ್ನು ಸಂರಕ್ಷಿಸಲು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ.

-ಡಾ.ಫಿಲಾಟೊವ್ ನಿಕೋಲೈ ನಿಕೊಲಾಯೆವಿಚ್,

ರಷ್ಯನ್ ಅಕಾಡೆಮಿಯ ಪೆಟ್ರೊಜವೋಡ್ಸ್ಕ್ ವಾಟರ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ.

ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ ಹೊಂದಾಣಿಕೆಯನ್ನರಿತು ಪರಿಣಾಮಕಾರಿ ಪರಿಹಾರಗಳನ್ನು ಅನುಷ್ಠಾನಗೊಳಿಸುವುದು ಸುಸ್ಥಿರ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು, ವಿಷಯ ತಜ್ಞರು, ಸಂಶೋಧಕರು ಮತ್ತು ಸಂಬಂಧಪಟ್ಟ ವ್ಯಕ್ತಿಗಳು, ಜ್ಞಾನ ಮತ್ತು ಕೌಶಲ್ಯ ಹಂಚಿಕೊಳ್ಳುವ ಮೂಲಕ ಒಟ್ಟಾಗಿ ಕೆಲಸ ಮಾಡಬೇಕು. ಈ ಸಮ್ಮೇಳನವು ಅಂತಹ ಸಹಯೋಗಕ್ಕೆ ಅಮೂಲ್ಯವಾದ ವೇದಿಕೆ ಒದಗಿಸಿದೆ. ಒಟ್ಟಾಗಿ ಕೆಲಸ ಮಾಡುತ್ತ, ನಾವೀನ್ಯತೆ ಅಳವಡಿಸಿಕೊಂಡು ನಿರ್ಣಾಯಕವಾಗಿ ಕಾರ್ಯನಿರ್ವಹಿಸುವ ಮೂಲಕ, ನಾವು ಸುಸ್ಥಿರ ಮತ್ತು ಅಭಿವೃದ್ಧಿ ಹೊಂದಿದ ಭವಿಷ್ಯ ನಿರ್ಮಿಸಬಹುದು.

-ಪ್ರೊ.ವಿದ್ಯಾಶಂಕರ್.ಎಸ್,

ವಿಟಿಯು ಕುಲಪತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ