ದೇಶದೊಳಗೆ ಭವಿಷ್ಯದಲ್ಲಿ ಅನಾರೋಗ್ಯ ತಾಂಡವ: ಎಡಿಸಿ ಆತಂಕ

KannadaprabhaNewsNetwork | Published : Jul 1, 2024 1:49 AM

ಸಾರಾಂಶ

ಸ್ವ ಇಚ್ಛೆಯಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಎಚ್.ಸಿ.ಅನಿಲ್‌ರಾಜ್-೩೧ ಬಾರಿ , ಡಿ.ತ್ಯಾಗರಾಜ್ ನಾಯ್ಡು -೧೧ ಬಾರಿ, ಎನ್.ಕಿರಣ್‌ಕುಮಾರ್- ೯ ಬಾರಿ, ಕೆ.ಪಿ.ಕುಮಾರ್ -೩೫ ಬಾರಿ, ಶಶಿಕಲಾ-೧೧ ಬಾರಿ, ಸೃಜನ್ ಗೌಡ-೪ ಬಾರಿ ಸೇರಿ ಒಟ್ಟು ೬ ಜನರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದೆ ಭಾರತ ದೇಶದಲ್ಲಿ ಬಡತನ ಎನ್ನುವುದು ತಲೆ ಎತ್ತಿ ಮೆರೆಯುತ್ತಿತ್ತು. ಆದರೆ, ಮುಂದಿನ ದಿನಗಳಲ್ಲಿ ಅನಾರೋಗ್ಯ ದೇಶದೊಳಗೆ ತಲೆಎತ್ತಿ ಮೆರೆಯುವ ಪರಿಸ್ಥಿತಿ ಬರಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬೇಸರ ವ್ಯಕ್ತಪಡಿಸಿದರು.

ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ವಿಶ್ವ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸುತ್ತಮುತ್ತಲೂ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ. ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ಇದರರ್ಥ. ಪ್ರತಿಯೊಬ್ಬರೂ ಕೂಡ ಉತ್ತಮ ಆರೋಗ್ಯ ವೃದ್ದಿಸಿಕೊಳ್ಳುವುದಕ್ಕೆ ಮನಸ್ಸು ಮಾಡಬೇಕು. ಮನುಷ್ಯರು ಆರೋಗ್ಯದಿಂದ ಇದ್ದರೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ರಕ್ತದಾನ ಮಾಡುವುದಕ್ಕೆ ಭಯ, ಹಿಂಜರಿಕೆ ಬೇಡ. ಧೈರ್ಯವಾಗಿ ರಕ್ತದಾನ ಮಾಡಿ ಕಷ್ಟದಲ್ಲಿರುವವರ ಜೀವ ಉಳಿಸಬಹುದು. ಇಡೀ ದೇಶದಲ್ಲಿ ರಕ್ತ ಹಾಗೂ ರಕ್ತದಾನಿಗಳ ಕೊರತೆ ಇದೆ. ರಕ್ತದಾನದಿಂದ ಆರೋಗ್ಯ ಏರುಪೇರು ಆಗುತ್ತದೆ ಎಂಬ ಮನೋಭಾವದಿಂದ ಬಹಳಷ್ಟು ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂಬ ಭಯದಿಂದ ಎಷ್ಟೋ ಜನರು ರಕ್ತದಾನ ಮಾಡಲು ಮುಂದೆ ಬರುವುದಿಲ್ಲ. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದುವರೆಗೂ ರಕ್ತದಾನ ಮಾಡಲು ಮುಂದೆ ಬರದೇ ಇರುವವರು ಮುಂದೆ ಬಂದು ರಕ್ತದಾನ ಮಾಡಬೇಕು ಎಂಬ ಉದ್ದೇಶದಿಂದಲೇ ರಕ್ತದಾನಿಗಳನ್ನು ಸನ್ಮಾನಿಸುತ್ತಿರುವುದಾಗಿ ತಿಳಿಸಿದರು.

ರಕ್ತದಾನಿಗಳಿಗೆ ಸನ್ಮಾನ:

ಸ್ವ ಇಚ್ಛೆಯಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಎಚ್.ಸಿ.ಅನಿಲ್‌ರಾಜ್-೩೧ ಬಾರಿ , ಡಿ.ತ್ಯಾಗರಾಜ್ ನಾಯ್ಡು -೧೧ ಬಾರಿ, ಎನ್.ಕಿರಣ್‌ಕುಮಾರ್- ೯ ಬಾರಿ, ಕೆ.ಪಿ.ಕುಮಾರ್ -೩೫ ಬಾರಿ, ಶಶಿಕಲಾ-೧೧ ಬಾರಿ, ಸೃಜನ್ ಗೌಡ-೪ ಬಾರಿ ಸೇರಿ ಒಟ್ಟು ೬ ಜನರನ್ನು ಸನ್ಮಾನಿಸಲಾಯಿತು. ರಕ್ತ ಸಂಗ್ರಹಣಾ ಸಂಸ್ಥೆಗಳಿಗೂ ಸನ್ಮಾನ:

೧ ಜೂನ್ ೨೦೨೩ ರಿಂದ ೩೧ ಮೇ ೨೦೨೪ ರವರೆಗೆ ರಕ್ತದಾನ ಶಿಬಿರ ನಡೆಸಿ ೧೫೭೨ ಯೂನಿಟ್ ರಕ್ತವನ್ನು ಸಂಗ್ರಹಿಸಿದ ಜೀವಧಾರೆ ಟ್ರಸ್ಟ್, ೧೦೮೦ ಯೂನಿಟ್ ರಕ್ತವನ್ನು ಸಂಗ್ರಹಿಸಿದ ಮಳವಳ್ಳಿ ಯುವಕ ಮಿತ್ರ, , ೭೩೮ ಯೂನಿಟ್ ರಕ್ತವನ್ನು ಸಂಗ್ರಹಿಸಿದ ಪಿಇಎಸ್ ಟ್ರಸ್ಟ್, ೫೪೧ ಯೂನಿಟ್ ರಕ್ತ ಸಂಗ್ರಹಿಸಿದ ಮದ್ದೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಘ ಮತ್ತು ಸಮಾನ ವಯಸ್ಕರ ವೇದಿಕೆ, ೩೫೬ ಯೂನಿಟ್ ರಕ್ತವನ್ನು ಸಂಗ್ರಹಿಸಿದ ಬಿಎಸ್‌ಯು ಶ್ರೀರಂಗಪಟ್ಟಣ ಸಂಸ್ಥೆ, ೧೮೩೭ ಯೂನಿಟ್ ರಕ್ತವನ್ನು ಸಂಗ್ರಹಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಮಿಮ್ಸ್ ನಿರ್ದೇಶಕ ಪಿ.ನರಸಿಂಹ ಸ್ವಾಮಿ, ರೆಡ್ ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷ ಮೀರಾ ಶಿವಲಿಂಗಯ್ಯ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್. ಆಶಾಲತಾ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಗಾಯಿತ್ರಿ, ಜಿಲ್ಲಾ ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಮಮತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Share this article