ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಗದಗ ಜಿಲ್ಲಾಡಳಿತದ ಕಂಪ್ಯೂಟರ್ ಜಪ್ತಿ

KannadaprabhaNewsNetwork |  
Published : Aug 14, 2026, 01:45 AM IST
13ಜಿಡಿಜಿ10ಎ | Kannada Prabha

ಸಾರಾಂಶ

ನಗರೋತ್ಥಾನ ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಅಸಲು ಮತ್ತು ದೀರ್ಘಕಾಲದ ಬಡ್ಡಿ ಮೊತ್ತವು ಬರೋಬ್ಬರಿ ₹60 ಲಕ್ಷಕ್ಕೆ ತಲುಪಿದ ಹಿನ್ನೆಲೆ, ಗದಗ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ಭವನದ ಪೀಠೋಪಕರಣ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಗುರುವಾರ ಅಧಿಕಾರಿಗಳ ಸಮ್ಮುಖದಲ್ಲೇ ಜಪ್ತಿ ನಡೆದಿದೆ.

ಗದಗ: ಸರ್ಕಾರಿ ಕಾಮಗಾರಿಗಳನ್ನು ಮುಗಿಸಿದ ನಂತರವೂ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಸದೆ ವರ್ಷಗಟ್ಟಲೆ ಸತಾಯಿಸುವ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಜಿಲ್ಲಾಡಳಿತ ಭವನ ಕಂಪ್ಯೂಟರ್ ಸೇರಿದಂತೆ ಅಗತ್ಯ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ಗುರುವಾರ ಜಪ್ತಿ ಮಾಡಲಾಗಿದೆ.

ನಗರೋತ್ಥಾನ ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಅಸಲು ಮತ್ತು ದೀರ್ಘಕಾಲದ ಬಡ್ಡಿ ಮೊತ್ತವು ಬರೋಬ್ಬರಿ ₹60 ಲಕ್ಷಕ್ಕೆ ತಲುಪಿದ ಹಿನ್ನೆಲೆ, ಗದಗ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ಭವನದ ಪೀಠೋಪಕರಣ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಗುರುವಾರ ಅಧಿಕಾರಿಗಳ ಸಮ್ಮುಖದಲ್ಲೇ ಜಪ್ತಿ ನಡೆದಿದೆ.

ಪ್ರಕರಣದ ವಿವರ: 2012- 13ರ ಅವಧಿಯಲ್ಲಿ ಜಿಲ್ಲೆಯ ಲಕ್ಷ್ಮೇಶ್ವರ, ಮುಳಗುಂದ ಹಾಗೂ ಶಿರಹಟ್ಟಿ ಪಟ್ಟಣಗಳ ವ್ಯಾಪ್ತಿಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಗರೋತ್ಥಾನ ಯೋಜನೆಯಡಿ ವಿವಿಧ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾಮಗಾರಿಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಗುತ್ತಿಗೆದಾರರಾದ ಎಸ್.ಎಸ್. ಪೊಲೀಸಪಾಟೀಲ್ ಅವರು ನಿಗದಿತ ಅವಧಿಯಲ್ಲೇ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಆದರೆ, ಕಾಮಗಾರಿ ಮುಗಿದು ವರ್ಷಗಳು ಉರುಳಿದರೂ ಗದಗ ಜಿಲ್ಲಾಡಳಿತವು ಅವರಿಗೆ ನೀಡಬೇಕಿದ್ದ ₹18 ಲಕ್ಷ ಬಾಕಿ ಮೊತ್ತವನ್ನು ಬಿಡುಗಡೆ ಮಾಡದೇ ಕಚೇರಿಯಿಂದ ಕಚೇರಿಗೆ ಅಲೆದಾಡಿಸಿ ತೀವ್ರವಾಗಿ ಸತಾಯಿಸಿತ್ತು. ಅಧಿಕಾರಿಗಳ ನಡೆಗೆ ಬೇಸತ್ತ ಗುತ್ತಿಗೆದಾರರು ಅಂತಿಮವಾಗಿ ತಮಗೆ ನ್ಯಾಯ ಒದಗಿಸಿಕೊಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

₹18 ಲಕ್ಷಕ್ಕೆ ₹42 ಲಕ್ಷ: ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಜಿಲ್ಲಾಡಳಿತವು ಹಣ ಪಾವತಿಸಲು ಯಾವುದೇ ಆಸಕ್ತಿ ತೋರಿಸದ ಕಾರಣ, ಮೂಲ ಅಸಲು ಮೊತ್ತವಾದ ₹18 ಲಕ್ಷಕ್ಕೆ ದಿನದಿಂದ ದಿನಕ್ಕೆ ಬಡ್ಡಿ ಸೇರುತ್ತಾ ಹೋಗಿ ಇಂದು ₹60 ಲಕ್ಷಕ್ಕೆ ತಲುಪಿದೆ. ಇಷ್ಟು ವರ್ಷಗಳಾದರೂ ಸಾರ್ವಜನಿಕರ ತೆರಿಗೆ ಹಣ ಮತ್ತು ಗುತ್ತಿಗೆದಾರರ ಶ್ರಮದ ದುಡ್ಡನ್ನು ಪಾವತಿಸದ ಜಿಲ್ಲಾಡಳಿತದ ನಡೆಗೆ ಗರಂ ಆದ ಗದಗ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು, ಗುತ್ತಿಗೆದಾರರ ಬಾಕಿ ಹಣ ವಸೂಲಾತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಅಧಿಕೃತ ಕಾರು ಹಾಗೂ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಒಳಗೊಂಡಂತೆ ಇಡೀ ಕಚೇರಿಯನ್ನೇ ಜಪ್ತಿ ಮಾಡುವಂತೆ ಖಡಕ್ ಆದೇಶ ನೀಡಿತ್ತು.

ಡಿಸಿ ಇರಲಿಲ್ಲ: ನ್ಯಾಯಾಲಯದ ಕಠಿಣ ಆದೇಶದ ಬೆನ್ನಲ್ಲೇ ಜಪ್ತಿ ಕಾರ್ಯಾಚರಣೆಗೆ ಕೋರ್ಟ್ ಸಿಬ್ಬಂದಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದಾಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ಥಳದಲ್ಲಿ ಇರಲಿಲ್ಲ. ಆದಾಗ್ಯೂ ನ್ಯಾಯಾಲಯದ ಆದೇಶದನ್ವಯ ಕಟ್ಟುನಿಟ್ಟಿನ ಜಪ್ತಿ ಪ್ರಕ್ರಿಯೆ ನಡೆದಿದ್ದು. ಜಿಲ್ಲಾಡಳಿತ ಭವನದಲ್ಲಿದ್ದ 19 ಕಂಪ್ಯೂಟರ್ ಮಾನಿಟರ್‌ಗಳು, 15 ಸಿಪಿಯುಗಳು ಹಾಗೂ ಒಂದು ಜೆರಾಕ್ಸ್ ಯಂತ್ರ ಸೇರಿದಂತೆ ಒಟ್ಟು 35 ಪ್ರಮುಖ ಕಚೇರಿ ಉಪಕರಣಗಳನ್ನು ಸ್ಥಳದಲ್ಲೇ ಮಹಜರು ನಡೆಸಿ ವಶಪಡಿಸಿಕೊಂಡಿದ್ದಾರೆ. ಜನರ ತೆರಿಗೆ ಹಣ ಪೋಲು

ಈ ಮಹತ್ವದ ಜಪ್ತಿ ಪ್ರಕ್ರಿಯೆಯ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ದಾಖಲೆಗಳು ಹಾಗೂ ನ್ಯಾಯಾಲಯದ ಆದೇಶ ಪ್ರತಿಯೊಂದಿಗೆ ಗುತ್ತಿಗೆದಾರರ ಪರ ವಕೀಲ ಎಸ್.ಎಸ್. ಗಟ್ಟಿರಡ್ಡಿಹಾಳ ಅವರು ಉಪಸ್ಥಿತರಿದ್ದು ಪ್ರಕ್ರಿಯೆಗೆ ಚಾಲನೆ ನೀಡಿದರು. ಅಭಿವೃದ್ಧಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ನೀಡದಿದ್ದರೆ ಬಡ್ಡಿಯ ರೂಪದಲ್ಲಿ ಲಕ್ಷಾಂತರ ರುಪಾಯಿ ಸಾರ್ವಜನಿಕರ ತೆರಿಗೆ ಹಣ ಹೇಗೆ ಪೋಲಾಗುತ್ತದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಜಿಲ್ಲೆಯ ಉನ್ನತ ಕಚೇರಿಯೇ ಹೀಗೆ ಮುಜುಗರ ಅನುಭವಿಸಬೇಕಾಗಿರುವುದು ಅಧಿಕಾರಿಗಳು ಮಾಡಿದ ನಿರ್ಲಕ್ಷ್ಯದಿಂದ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ