ನಿಜವಾದ ಸಾಂಸ್ಕೃತಿಕ ರಾಜಧಾನಿ ಗದಗ ಜಿಲ್ಲೆ: ವಿವೇಕಾನಂದಗೌಡ ಪಾಟೀಲ

KannadaprabhaNewsNetwork | Published : Jan 21, 2025 12:31 AM

ಸಾರಾಂಶ

ನಮ್ಮ ಕಲೆ, ಆಚಾರ ವಿಚಾರ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸದಿದ್ದರೆ ಮುಂದಿನ ಜನಮಾನಕ್ಕೆ ಅದು ತಲುಪುವುದಿಲ್ಲ. ಅದನ್ನು ವರ್ಗಾಯಿಸಲು ಚರ್ಚೆ, ಹರಟೆ, ಸಮ್ಮೇಳನ ಅಗತ್ಯ ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ನರೇಗಲ್ಲ/ಗಜೇಂದ್ರಗಡ: ಗದಗ ಜಿಲ್ಲೆ ಹಲವಾರು ಸಾಹಿತಿಗಳು ಸಾಹಿತ್ಯಿಕ ಕೃಷಿ ಮಾಡಿದ ಜಿಲ್ಲೆ. ಗದಗ ಜಿಲ್ಲೆ ಸಾಂಸ್ಕೃತಿಕ ರಾಜಧಾನಿ ಎಂದು ಕರೆದರೆ ತಪ್ಪಿಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಗಜೇಂದ್ರಗಡದ ಜ. ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಸೋಮವಾರ ನಡೆದ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇಲ್ಲಿ ಕವಿ ಕುಮಾರವ್ಯಾಸ, ಸಾಹಿತಿ ಚಾಮರಸ, ದುರ್ಗಸಿಂಹ, ನಯಸೇನ, ಸಂಗೀತದ ದಿಗ್ಗಜ ಭೀಮಸೇನ ಜೋಶಿ, ಪುಟ್ಟರಾಜ ಗವಾಯಿಗಳು, ಸಾಂಸ್ಕೃತಿಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ನೆಲ. ಕಲಾಕ್ಷೇತ್ರದಲ್ಲಿ ಚಟ್ಟಿಯವರು, ವಾಸ್ತುಶಿಲ್ಪ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.ನಮ್ಮ ಕಲೆ, ಆಚಾರ ವಿಚಾರ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸದಿದ್ದರೆ ಮುಂದಿನ ಜನಮಾನಕ್ಕೆ ಅದು ತಲುಪುವುದಿಲ್ಲ. ಅದನ್ನು ವರ್ಗಾಯಿಸಲು ಚರ್ಚೆ, ಹರಟೆ, ಸಮ್ಮೇಳನ ಅಗತ್ಯ ಎಂದರು.

ಕನ್ನಡನಾಡು ಏಕೀಕರಣ ಆಗುವುದಕ್ಕಿಂತ ಮೊದಲು ವಿವಿಧ ಭಾಗಗಳಾಗಿ ಹರಿದು ಹಂಚಿಹೋಗಿತ್ತು. ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಮದ್ರಾಸ್‌ ಕರ್ನಾಟಕವಾಗಿ ತೆಲುಗು, ತಮಿಳು, ಉರ್ದು, ಮರಾಠಿ ಪ್ರಭಾವಕ್ಕೆ ಒಳಗಾಗಿತ್ತು. ಕನ್ನಡ ಕೇವಲ ಮನೆಮಾತಾಗಿತ್ತು. ಈ ಸಂದರ್ಭದಲ್ಲಿ ಕನ್ನಡಿಗರು ಭಾಷೆಯ ನೆಪದಲ್ಲಿ ನಕ್ಷೆಯ ವ್ಯಾಪ್ತಿಗೆ ಬರಲಿ ಎಂಬ ಉದ್ದೇಶದಿಂದ ನಡೆದ ಹೋರಾಟದಲ್ಲಿ ಮುಂಚೂಣಿಯಾಗಿ ಕೆಲಸ ಮಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತು. ಇದು ಸಮ್ಮೇಳನ, ವಿಚಾರ ಸಂಕಿರಣ, ಚರ್ಚೆಯ ಮೂಲಕ ಕನ್ನಡಿಗರಲ್ಲಿ ಕನ್ನಡದ ಪ್ರಜ್ಜೆಯನ್ನು ಸದಾ ಜಾಗ್ರತಗೊಳಿಸುವ ಕಾರ್ಯವನ್ನು ಶತಮಾನಗಳಿಂದ ಮಾಡುತ್ತಿದೆ ಎಂದು ಹೇಳಿದರು.

ಜಿಲ್ಲೆಯಾಗಿ 25 ವರ್ಷ ದಾಟಿದೆ. ಈ ವೇಳೆ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ಗದಗ ಜಿಲ್ಲೆಯ ಕೃಷಿಕರ ಬದುಕು ಹಸನಾಗಬೇಕು. ನೀರಾವರಿ ಯೋಜನೆ, ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಹೀಗೆ ಹತ್ತು ಹಲವು ಚರ್ಚೆಗಳು ಸಮ್ಮೇಳನದಲ್ಲಿ ನಡೆಯಲಿವೆ ಎಂದರು.

ಕೋಟೆನಾಡಿಗೆ ಸಾಂಸ್ಕೃತಿಕ ಹಿನ್ನೆಲೆ ಇದೆ, ಅದನ್ನು ಎತ್ತಿಹಿಡಿಯುವ ಜತೆಗೆ ಇಂದಿನ ಜನತೆಗೆ ಅದರ ಮಾಹಿತಿ ತಿಳಿಸಿಕೊಡುವ ಕಾರ್ಯ ಈ ಕಾರ್ಯಕ್ರಮದ ಮೂಲಕ ಜರುಗುತ್ತಿದೆ. ಯಾವುದೇ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಬೆಳೆಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಅಥವಾ ಜನಪ್ರತಿನಿಧಿಗಳು ಇದಕ್ಕೆ ಬೆಂಬಲ, ಪ್ರೋತ್ಸಾಹ ನೀಡಿದಾಗ ಮಾತ್ರ ಸಾಹಿತ್ಯಿಕ ಕಾರ್ಯಗಳನ್ನು ಹೆಚ್ಚು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಶಾಸಕ ಜಿ.ಎಸ್‌. ಪಾಟೀಲ ಹಾಗೂ ಹಿರಿಯ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಇದ್ದರು.

Share this article