ಕೊಪ್ಪಳ:
ಗದಗ-ವಾಡಿ ಮತ್ತು ಮುನಿರಾಬಾದ್-ಮೆಹಮೂಬ್‌ನಗರ ರೈಲ್ವೆ ಮಾರ್ಗಗಳು ಮುಂಬೈ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸಂಪರ್ಕ ಕಲ್ಪಿಸುವ ಯೋಜನೆಗಳಾಗಿದ್ದು, ಉತ್ತರ ಕರ್ನಾಟಕ ಮಹತ್ವಾಂಕ್ಷಿ ಯೋಜನೆಗಳಾಗಿವೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಗದಗ-ವಾಡಿ ರೈಲ್ವೆ ಮಾರ್ಗ ಮುಂಬೈ ಕರ್ನಾಟಕದಿಂದ ಕಲ್ಯಾಣ ಕರ್ನಾಟಕಕ್ಕೆ ನೇರ ರೈಲು ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಹುಬ್ಬಳ್ಳಿ, ಗದಗ, ಯಲಬುರ್ಗಾ, ಕುಕನೂರು, ಕುಷ್ಟಗಿ, ಮುದಗಲ್, ಲಿಂಗಸೂರು, ಹಟ್ಟಿ ಚಿನ್ನದ ಗಣಿ, ಸುರಪುರ, ಶಹಪುರದಿಂದ ವಾಡಿ ವರೆಗಿನ ಈ ಮಾರ್ಗವು ಮುಂದಿನ ದಿನಗಳಲ್ಲಿ ವಾಣಿಜ್ಯ ರೈಲ್ವೆ ಮಾರ್ಗಗಳಿಗೆ ಸಂಪರ್ಕ ಕೊಂಡಿಯಾಗಲಿದೆ ಎಂದು ಭವಿಷ್ಯ ನುಡಿದರು.
ಭವಿಷ್ಯದಲ್ಲಿ ಗೋವಾ-ಹೈದರಾಬಾದ್, ಗೋವಾ-ದೆಹಲಿಗೆ ವಾಯಾ ಇದೇ ಮಾರ್ಗವಾಗಿ ರೈಲುಗಳು ಸಂಚರಿಸಲು ಅನುಕೂಲವಾಗಲಿದೆ. ಹುಬ್ಬಳ್ಳಿ-ಸೋಲಾಪುರ, ಹುಬ್ಬಳ್ಳಿ-ಬೀದರ್ ರೈಲ್ವೆ ಮಾರ್ಗಕ್ಕೆ ಇದು ಪರ್ಯಾಯ ಮಾರ್ಗ ಆಗಲಿದ್ದು, ಇದರಿಂದ ನಮ್ಮ ಜನಕ್ಕೆ ಅನುಕೂಲವಾಗಲಿದೆ. ಈ ಹಿಂದೆ ನಾನು ಸಂಸದನಾದ ವೇಳೆ ಮುನಿರಾಬಾದ್-ಮಹೆಬೂಬ್ ನಗರ ಮತ್ತು ಗದಗ-ವಾಡಿ ರೈಲ್ವೆ ಮಾರ್ಗಕ್ಕೆ ಶಿಫಾರಸು ಮಾಡಿದ್ದೆ. ಮಲ್ಲಿಕಾರ್ಜುನ ಖರ್ಗೆ ಅಂದು ರೈಲ್ವೆ ಮಂತ್ರಿಯಾಗಿದ್ದ ವೇಳೆ ಈ ಮಾರ್ಗ ಸೇರಿಸಲು ಪ್ರಯತ್ನಿಸಿದ್ದರು ಎಂದರು.ಗದಗ-ವಾಡಿ ರೈಲ್ವೆ ಮಾರ್ಗದ ತಳಕಲ್‌ನಿಂದ ಕುಕನೂರು, ಯಲಬುರ್ಗಾ, ಕುಷ್ಟಗಿ ವರೆಗೆ 58 ಕಿಮೀ ವರೆಗೆ ಕಾಮಗಾರಿ ಪೂರ್ಣಗೊಂಡಿದೆ. ವಾಡಿಯಿಂದ ಶಹಪುರ ವರೆಗೆ 48 ರೈಲ್ವೆ ಲೈನ್ 3ರಿಂದ 6 ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಇದರಿಂದ ಒಟ್ಟು 106 ಕಿಮೀ ವರೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರ ಮಧ್ಯೆದಲ್ಲಿರುವ 165 ಕಿಮೀ ಕಾಮಗಾರಿಗೆ ರಾಜ್ಯ ಸರ್ಕಾರವು ಪತ್ರ ಬರೆದಿದ್ದು, ಕೇಂದ್ರ ಸರ್ಕಾರವು ಸಿಂಗಲ್ ಟೆಂಡರ್ ಕರೆದಿದೆ. ಇದಕ್ಕೆ ರಾಜ್ಯ ಸರ್ಕಾರ ಹಣ ನೀಡಲಿದೆ. ಗದಗ-ವಾಡಿ ರೈಲ್ವೆ ಮಾರ್ಗದ ಪೂರ್ಣಗೊಂಡಿರುವ 58 ಕಿಮೀ ರೈಲ್ವೆ ಲೈನ್‌ನಲ್ಲಿ ಹುಬ್ಬಳ್ಳಿಯಿಂದ ರೈಲ್ವೆ ಆರಂಭಿಸಬೇಕೆಂದು ರಾಜ್ಯ ಸರ್ಕಾರದಿಂದ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗಿದೆ. ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಿದ್ದು ಮೇ 15ರೊಳಗಾಗಿ ಹುಬ್ಬಳ್ಳಿ-ಕುಷ್ಟಗಿ ರೈಲು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಗದಗ-ವಾಡಿ ರೈಲ್ವೆ ಲೈನ್ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರಿಂದ ಎಲ್ಲ ಭಾಗಗಳು ತ್ವರಿತ ಅಭಿವೃದ್ಧಿಯಾಗಲಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ. 50ರಷ್ಟು ಅನುದಾನ ನೀಡಿದೆ. ಈಗಾಗಲೇ ಗದಗ-ವಾಡಿ ರೈಲ್ವೆ ಲೈನ್ ಕಾಮಗಾರಿ ತಳಕಲ್‌ನಿಂದ ಕುಷ್ಟಗಿ ವರೆಗೆ ಮುಗಿದಿದ್ದು, ರೈಲು ಪ್ರಾಯೋಗಿಕವಾಗಿ ಸಂಚರಿಸಿದೆ. ಶೀಘ್ರವೇ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಗದಗ-ವಾಡಿ ರೈಲು ಲೈನ್‌ನಿಂದ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.ಈ ವೇಳೆ ನಗರಸಭೆ ಸದಸ್ಯ ಮಹೇಂದ್ರ ಛೋಪ್ರಾ, ಮುತ್ತುರಾಜ ಕುಷ್ಟಗಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ ಹೇಮಂತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀಗವಿಸಿದ್ಧೇಶ್ವರ ಹೆಸರು ನಾಮಕರಣ ಮಾಡುವಂತೆ ವ್ಯಾಪಕ ಅಭಿಪ್ರಾಯ ಬಂದರೂ ಸಹ ಶ್ರೀಗವಿಸಿದ್ಧೇಶ್ವರ ಶ್ರೀಗಳು ಹೆಸರು ಬೇಡ ಎಂದಿದ್ದರಿಂದ ಕೈಬಿಡಲಾಗಿದೆ. ಬೇರೆ ಯಾವುದೇ ಹೆಸರು ಇಡುವ ಕುರಿತು ಸಹ ನಿರ್ಧರಿಸಿಲ್ಲ.ರಾಜಶೇಖರ ಹಿಟ್ನಾಳ ಸಂಸದ