ರಾಮಾನುಜಾಚಾರ್ಯರಿಗೆ ವೈಭವದಿಂದ ನಡೆದ ಗಜವಾಹನೋತ್ಸವ

KannadaprabhaNewsNetwork | Published : May 1, 2025 12:53 AM

ಸಾರಾಂಶ

ರಾಮಾನುಜರಿಗೆ ಅಭಿಷೇಕ ಹಾಗೂ ಸಂಜೆ ಮಂಟಪವಾಹನೋತ್ಸವಗಳು ನೆರವೇರಿತು. 9ನೇ ದಿನದ ಮೇ 1 ರಂದು ಮಹಾರಥೋತ್ಸವ ನೆರವೇರಲಿದೆ. ಚೆಲವನಾರಾಯಣಸ್ವಾಮಿ ಸಾನ್ನಿಧ್ಯ ಆಚಾರ್ಯರಿಗೆ ರಥೋತ್ಸವ ನಡೆಯುವ ಕರ್ನಾಟಕದ ಏಕೈಕಕ್ಷೇತ್ರದಲ್ಲಿ ರಥಮಂಟಪವನ್ನು ಸಜ್ಜುಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ಬುಧವಾರ ಬೆಳಗ್ಗೆ ರಾಮಾನುಜಾಚಾರ್ಯರಿಗೆ ದಿವ್ಯಪ್ರಬಂಧ ಪಾರಾಯಣದೊಂದಿಗೆ ಗಜವಾಹನೋತ್ಸವ ವೈಭವದಿಂದ ನೆರವೇರಿತು.

ನಂತರ ರಾಮಾನುಜರಿಗೆ ಅಭಿಷೇಕ ಹಾಗೂ ಸಂಜೆ ಮಂಟಪವಾಹನೋತ್ಸವಗಳು ನೆರವೇರಿತು. 9ನೇ ದಿನದ ಮೇ 1 ರಂದು ಮಹಾರಥೋತ್ಸವ ನೆರವೇರಲಿದೆ. ಚೆಲವನಾರಾಯಣಸ್ವಾಮಿ ಸಾನ್ನಿಧ್ಯ ಆಚಾರ್ಯರಿಗೆ ರಥೋತ್ಸವ ನಡೆಯುವ ಕರ್ನಾಟಕದ ಏಕೈಕಕ್ಷೇತ್ರದಲ್ಲಿ ರಥಮಂಟಪವನ್ನು ಸಜ್ಜುಗೊಳಿಸಲಾಗಿದೆ.

ಆಚಾರ್ಯರ ತಿರುನಕ್ಷತ್ರಮಹೋತ್ಸವ ವೈಭವಯುತವಾಗಿ ನಡೆಯಲು ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ಪ್ರಮುಖವಾಗಿ ಶ್ರಮಿಸುತ್ತಿದ್ದು, ಥೋತ್ಸವಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿದ್ದಾರೆ.

ಯಾತ್ರಾದಾನದ ನಂತರ ಬೆಳಿಗ್ಗೆ 8 ಗಂಟೆ ವೇಳೆಗೆ ರಥಾರೋಹಣ ಮಾಡಿ ರಥದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ರಾಮಾನುಜಾಚಾರ್ಯರ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಆಚಾರ್ಯರ ರಥ ಚತುರ್ವೀದಿಗಳಲ್ಲಿ ಸಂಚರಿಸಿ ಸಂಜೆಯ ವೇಳೆಗೆ ರಥಮಂಟಪ ತಲುಪಲಿದೆ.

ಸಂಜೆ ಯತಿರಾಜಮಠದಲ್ಲಿ ಅಭಿಷೇಕ ನಡೆದ ನಂತರ ಸ್ಥಾನೀಕರಿಂದ ರಾಮಾನುಜರು ಬಿಕ್ಷೆ ಸ್ವೀಕರಿಸುತ್ತಿದ್ದುದರ ಐತಿಹಾಸಿಕ ಪ್ರತೀಕವಾಗಿ ನಡೆಯುವ ಭಿಕ್ಷಾ ಕೈಂಕರ್ಯಸೇವೆಯನ್ನು ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮನೆತನದ ನೆರವೇರಿಸಲಿದೆ. ಈ ವರ್ಷ ರಥೋತ್ಸವ ರಜಾದಿನ ಬಂದಿರುವ ಕಾರಣ ಹೆಚ್ಚಿನ ಸಂಖ್ಯೆಯ ಶ್ರೀವೈಷ್ಣವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ನಾಳೆ ಆಚಾರ್ಯರಾಮಾನುಜರ ತಿರುನಕ್ಷತ್ರ ಮಹೋತ್ಸವ ನಡೆಯಲಿದೆ. ಅಂದು ದೇಗುಲದ ಪೂಜಾಕೈಂಕರ್ಯಗಳು ಬೆಳಗಿನ 5 ಗಂಟೆಗೆ ಆರಂಭವಾಗಲಿವೆ. 7 ಗಂಟೆಗೆ ಮಂಟಪವಾಹನೋತ್ಸವ ನಡೆಯಲಿದೆ. ನಂತರ ಕಲ್ಯಾಣಿಯಿಂದ ಮೆರವಣಿಗೆಯೊಂದಿಗೆ ಪವಿತ್ರತೀರ್ಥತಂದು ದ್ವಾದಶಾರಾಧನೆಯೊಂದಿಗೆ ಅಭಿಷೇಕ ನೆರವೇರಿಸಲಾಗುತ್ತದೆ.

ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗದ ನಂತರ ಸಂಜೆ ಗಂದದ ಅಲಂಕಾರದೊಡನೆ ರಾಮಾನುಜರ ಉತ್ಸವ ಕಲ್ಯಾಣಿಗೆ ನೆರವೇರಲಿದೆ.

ಜ್ಯೋತಿ ನಿವಾಸ್ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶ

ಶ್ರೀರಂಗಪಟ್ಟಣ: ಪಟ್ಟಣದ ಜ್ಯೋತಿ ನಿವಾಸ್ ಪ್ರೌಢಶಾಲೆಗೆ 10ನೇ ತರಗತಿ (ಐಸಿಎಸ್‌ಸಿ) ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. 2025ನೇ ಸಾಲಿನಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ 33 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 22 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುವ ಮೂಲಕ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ. ಎಚ್.ಜಿ ನಿತೇಶ್ ಶೇ.95.2 ರಷ್ಟು, ಆಶ್ರಿತ ಭಟ್ ಶೇ.94.8ರಷ್ಟು, ಕೆ.ಆರ್.ಸಮರ್ಥ್‌ಗೌಡ ಶೇ.94.2 ರಷ್ಟು ಅಂಕಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲೆ ಸಿಸ್ಟರ್ ಸೋಜಿ, ಉಪ ಪ್ರಾಂಶುಪಾಲೆ ಸಿಸ್ಟರ್ ಆನಿಸ್, ಶಾಲೆ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

Share this article