ಗಜೇಂದ್ರಗಡ ಕಸಾಪ ತಾಲೂಕು ಘಟಕ 4 ವರ್ಷದ ಲೆಕ್ಕಪತ್ರ ನೀಡಿಲ್ಲ: ಆರೋಪ

KannadaprabhaNewsNetwork |  
Published : Oct 27, 2025, 12:30 AM IST
ಗಜೇಂದ್ರಗಡ ಮೈಸೂರ ಮಠದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಅಮರೇಶ ಗಾಣಿಗೇರ ಮಾತನಾಡಿದರು. | Kannada Prabha

ಸಾರಾಂಶ

ಕಸಾಪ ಘಟಕದ ಅಧ್ಯಕ್ಷ ಅಮರೇಶ ಗಾಣಿಗೇರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ತಾಯಿಯಿದ್ದಂತೆ. ಅದರಲ್ಲಿ ಏನೇ ತಪ್ಪುಗಳಿದ್ದರೂ ಮೊದಲು ಆಂತರಿಕವಾಗಿ ಚರ್ಚಿಸಬೇಕಿತ್ತು. ಸಾಹಿತ್ಯ ಪರಿಷತ್ತಿನಲ್ಲಿ ಬಹಳಷ್ಟು ಮೇಧಾವಿಗಳು, ಬುದ್ಧಿವಂತರಿದ್ದಾರೆ. ಪ್ರಶ್ನೆ ಮಾಡುವವರಿಗೆ ನಾವು ಮರುಪ್ರಶ್ನೆ ಮಾಡಬಾರದು. ಮಾಡಿದರೆ ಸರ್ವಧಿಕಾರಿ ಎನ್ನುತ್ತಾರೆ ಎಂದರು.

ಗಜೇಂದ್ರಗಡ: ಪಟ್ಟಣದ ಮೈಸೂರು ಮಠದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪೂರ್ವಭಾವಿ ಸಭೆಯಲ್ಲಿ ಕಸಾಪ ತಾಲೂಕು ಘಟಕದ ಕಾರ್ಯವೈಖರಿಗೆ ಆಜೀವ ಸದಸ್ಯರು ಆರೋಪಗಳ ಸುರಿಮಳೆಗೈದ ಘಟನೆ ನಡೆಯಿತು.

ತಾಲೂಕು ಕಸಾಪ ಘಟಕವು ಸಾಹಿತಿ ಎಸ್.ಎಲ್. ಭೈರಪ್ಪ ಅವರು ನಿಧನರಾದಾಗ, ಬಾನು ಮುಸ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬಂದಾಗಲೂ ಸ್ಪಂದನೆ ಮಾಡಲಿಲ್ಲ. ಇದು ವಿಪರ್ಯಾಸ. ಇತ್ತ ಕನ್ನಡ ರಾಜ್ಯೋತ್ಸವವನ್ನು ಗಮನಕ್ಕೆ ಬಾರದಷ್ಟು ಸರಳವಾಗಿ ಆಚರಿಸಿದ್ದು ಸರಿಯಲ್ಲ ಎಂದರು.

ಕಸಾಪ ತಾಲೂಕು ಘಟಕಕ್ಕೆ ೪ ವರ್ಷದ ನಂತರ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕಿಡಿಕಾರಿದ ಕೆಲ ಆಜೀವ ಸದಸ್ಯರು, ಸಾಹಿತ್ಯಕ ಕೆಲಸಗಳ ಸಂದರ್ಭದಲ್ಲಿ ಸಲಹೆಗಳನ್ನು ನೀಡುವವರ ಮೇಲೆಯೇ ಜವಾಬ್ದಾರಿ ಹೊರಿಸುವ ಕೆಲಸವನ್ನು ತಾಲೂಕಾಧ್ಯಕ್ಷರು ಮಾಡುತ್ತಿದ್ದಾರೆ.

ಕಸಾಪ ಕಾರ್ಯ ಚಟುವಟಿಕೆಗಳು ಕೇವಲ ಒಂದು ಕಾಲೇಜಿಗೆ ಸೀಮಿತವಾಗಿದೆಯೇ? ಜಾತ್ರೆಯಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದು ಎಷ್ಟು ಸೂಕ್ತ? ಏಕಪಕ್ಷಿಯ, ಸರ್ವಾಧಿಕಾರಿ ನಿರ್ಧಾರಗಳಿಂದಾಗಿ ಇಷ್ಟೆಲ್ಲ ಸಮಸ್ಯೆಗಳು ಉದ್ಭವವಾಗುತ್ತಿವೆ. ಕಸಾಪ ಆಜೀವ ಸದಸ್ಯರ ನಡುವೆ ಒಗ್ಗಟ್ಟು ಮೂಡಿಸಬೇಕಿದ್ದ ತಾಲೂಕು ಅಧ್ಯಕ್ಷರು ಒಡಕುಂಟು ಮಾಡುತ್ತಿರುವುದು ದುರ್ದೈವ. ೪ ವರ್ಷದ ಲೆಕ್ಕಪತ್ರ ನೀಡಿಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಾಗ ಹೋಬಳಿ, ಗ್ರಾಮ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಹ್ವಾನಿಸಿದ್ದೀರಿ. ಎಲ್ಲ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರ ನೀಡದಿದ್ದರೆ ಬಂಡಾಯ ಅನಿವಾರ್ಯ ಎಂದು ಹರಿಹಾಯ್ದರು. ಕಸಾಪ ಅಧ್ಯಕ್ಷ ಅಮರೇಶ ಗಾಣಿಗೇರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ತಾಯಿಯಿದ್ದಂತೆ. ಅದರಲ್ಲಿ ಏನೇ ತಪ್ಪುಗಳಿದ್ದರೂ ಮೊದಲು ಆಂತರಿಕವಾಗಿ ಚರ್ಚಿಸಬೇಕಿತ್ತು. ಸಾಹಿತ್ಯ ಪರಿಷತ್ತಿನಲ್ಲಿ ಬಹಳಷ್ಟು ಮೇಧಾವಿಗಳು, ಬುದ್ಧಿವಂತರಿದ್ದಾರೆ. ಪ್ರಶ್ನೆ ಮಾಡುವವರಿಗೆ ನಾವು ಮರುಪ್ರಶ್ನೆ ಮಾಡಬಾರದು. ಮಾಡಿದರೆ ಸರ್ವಧಿಕಾರಿ ಎನ್ನುತ್ತಾರೆ.

ರಾಜ್ಯ ಕಸಾಪದಿಂದ ₹೫ ಲಕ್ಷ, ರಾಜ್ಯ ಖನಿಜ ಅಭಿವೃದ್ಧಿ ನಿಗಮದಿಂದ ₹೪,೯೦ ಲಕ್ಷ, ವಿವಿಧ ಸಂಘ ಸಂಸ್ಥೆಗಳಿಂದ ₹೧,೯೦ ಲಕ್ಷ ಸೇರಿದಂತೆ ಅಂದಾಜು ₹೧೧ ಲಕ್ಷ ಹಣ ಕೂಡಿತ್ತು. ಆದರೆ ಖರ್ಚು ₹೨೬ ಲಕ್ಷ ಆಗಿದೆ. ಇನ್ನುಳಿದ ಹಣವನ್ನು ಸ್ವಾಗತ ಸಮಿತಿ ನಿರ್ವಹಿಸಿದೆ. ಯಾವುದೇ ತರಹದ ದುಡ್ಡಿಲ್ಲ. ಜಿಲ್ಲಾ ಸಮ್ಮೇಳನ ವೇಳೆ ಸ್ಥಳೀಯರಿಂದ ಬಿಡಿಗಾಸು ಪಡೆದಿಲ್ಲ. ಸಂಘ- ಸಂಸ್ಥೆಗಳಿಂದ ಪಡೆದಿದ್ದೇವೆ. ೪ ವರ್ಷಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಿಸಿಲ್ಲ ಎಂಬ ಆರೋಪ ಸತ್ಯಕ್ಕೆ ದೂರ. ಆಚರಿಸಿದ್ದೇವೆ ಎಂದರು.

ಅನುದಾನ ಸಿಗಲ್ಲ

ಎಲ್ಲರನ್ನೂ, ಎಲ್ಲ ವೇಳೆ ಸಮಾಧಾನ ಪಡಿಸಲು ಸಾಧ್ಯವಾಗುವುದಿಲ್ಲ. ಸಾಹಿತ್ಯಿಕ ಕೆಲಸಕ್ಕೆ ಜಿಲ್ಲಾ, ರಾಜ್ಯ ಘಟಕದಿಂದ ಅನುದಾನ ಬರುವುದಿಲ್ಲ. ಅಧ್ಯಕ್ಷರ ಬಳಿ ಅದರ ಕುರಿತು ಲೆಕ್ಕಪತ್ರವಿದ್ದರೆ ನೀಡಬೇಕು ಎಂದು ಪ್ರಭು ಚವಡಿ ತಿಳಿಸಿದರೆ, ಕಸಾಪ ಜಗಳವಾಡುವ ಪರಿಷತ್ ಅಲ್ಲ. ಪರಸ್ಪರ ಸಹಕಾರದಿಂದ ನಡೆಯುವ ಪರಿಷತ್. ಅಧ್ಯಕ್ಷರು ತಮ್ಮ ಮೇಲೆ ಬಂದಿರುವ ಆಪಾದನೆಗಳು ಮುಂದೆ ಬರದಂತೆ ನೋಡಿಕೊಳ್ಳಲಿ ಎಂದು ಬಿ.ಎ. ಕೆಂಚರೆಡ್ಡಿ ಸಲಹೆ ನೀಡಿದರು.

ಹಕ್ಕುಗಳ ಬಗ್ಗೆ ಚರ್ಚೆಯಗುತ್ತಿದೆ. ಆದರೆ ಕರ್ತವ್ಯಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. ಹಿನ್ನಡೆಗೆ ಕಾರಣಗಳೇನು ಎಂಬುದರ ಕುರಿತು ಚರ್ಚಿಸಿ. ಅಧ್ಯಕ್ಷರು ಎಲ್ಲರನ್ನು ಸಂಪರ್ಕಿಸಲು ಆಗುವುದಿಲ್ಲ. ರಾಜಕಾರಣಿಗಳು ಇಲ್ಲದೆ ದೊಡ್ಡ ಮಟ್ಟದ ಸಮ್ಮೇಳನ ನಡೆಸಲು ಆಗುವುದಿಲ್ಲ ಎಂದು ಸಿದ್ದಪ್ಪ ಬಂಡಿ ಹೇಳಿದರು.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ