ಗಜೇಂದ್ರಗಡ: ಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ದಾಳಿಯಿಂದ ಮಹಿಳೆ ಅಸುನೀಗಿದ ಆರೋಪದ ಹಿನ್ನೆಲೆ ಸ್ಥಳೀಯ ಪುರಸಭೆ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿ ೨೦೦ಕ್ಕೂ ಅಧಿಕ ಬೀದಿ ನಾಯಿಗಳನ್ನು ದೂರದ ಗುಡ್ಡದಲ್ಲಿ ಬಿಟ್ಟು ಬಂದಿದ್ದಾರೆ.
ಪಟ್ಟಣದ ಜೋಡು ರಸ್ತೆ, ಅಗಸಿ, ಹೀರೆಬಜಾರ, ಗೌಳಿಗಲ್ಲಿ, ನಾಲಗಾರ ಓಣಿ ಸೇರಿ ಅನೇಕ ಬಡಾವಣೆಗಳಲ್ಲಿ ಬೀದಿ ನಾಯಿಗಳು, ಬೀದಿ ದನಗಳ ಹಾವಳಿಯಿಂದ ಜನತೆ ಬೇಸತ್ತಿದ್ದಾರೆ. ಪರಿಣಾಮ ಜೋಡು ರಸ್ತೆ, ಮೈಸೂರ ಮಠದ ಬಳಿ ಸಂಜೆ ಬೀದಿ ದನಗಳ ಕಾಳಗ ಆರಂಭವಾದರೆ ಸಾರ್ವಜನಿಕರು ಪ್ರಾಣ ಭಯದಲ್ಲಿ ಸಂಚರಿಸುವ ದುಸ್ಥಿತಿಯಿದೆ. ಇತ್ತ ದ್ವೀಚಕ್ರ ವಾಹನ ಸವಾರರು ಹಾಗೂ ಮಕ್ಕಳ ಮೇಲೆ ಎರಗುವ ಬೀದಿ ನಾಯಿಗಳ ದಾಳಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆತಿದ್ದು ಶುಕ್ರವಾರ ಹಿಡಿದ ೧೦೨ ಬೀದಿ ನಾಯಿಗಳನ್ನು ಹಾಗೂ ಶನಿವಾರ ಸೆರೆ ಹಿಡಿದ ೯೨ ಬೀದಿ ನಾಯಿಗಳನ್ನು ದಟ್ಟವಾದ ಗುಡ್ಡದಲ್ಲಿ ಬಿಟ್ಟು ಬಂದಿದ್ದಾರೆ. ಈಗ ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳ ಕಾರ್ಯಾಚರಣೆಗೆ ಮುಂದಾದಂತೆ ಬೀದಿ ದನಗಳ ಕಾರ್ಯಾಚರಣೆಗೆ ಮುಂದಾಗಬೇಕು ಎಂಬ ಆಗ್ರಹಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಕಾರ್ಯಾಚರಣೆ ಕೈಗೊಂಡಿದ್ದು, ೨೦೦ಕ್ಕೂ ಅಧಿಕ ನಾಯಿಗಳನ್ನು ಸೆರೆಹಿಡಿಯಲಾಗಿದೆ. ಭಾನುವಾರ ಸಹ ಕಾರ್ಯಾಚರಣೆ ನಡೆಸುತ್ತಿದ್ದು ಸಾಕು ನಾಯಿಗಳಿಗೆ ಬೆಲ್ಟ್ ಹಾಕಿ ಮನೆಯ ಕಂಪೌಂಡನಲ್ಲಿ ಕಟ್ಟಿಹಾಕಬೇಕು.ಸಾರ್ವಜನಿಕರಿಗೆ ತೊಂದರೆ ನೀಡುವ ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಬಿಟ್ಟು ಬರಲು ಕಾರ್ಯಾಚರಣೆ ಕೈಗೊಂಡಿದ್ದೇವೆ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಶಿವಕುಮಾರ ಇಲಾಳ ಹೇಳಿದರು.ಪಟ್ಟಣದಲ್ಲಿ ಬೀದಿ ನಾಯಿಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ನೀಡುವ ಪ್ರಾಣಿಗಳ ಕಾರ್ಯಾಚರಣೆ ನಡೆಸುವುದಾಗಿ ಜಾಗೃತಿ ಮೂಡಿಸಿಸುವುದರ ಜತೆಗೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದೇನೆ. ಸಾರ್ವಜನಿಕರು ಅಧಿಕಾರಿಗಳಿಗೆ ಸಹಕಾರ ನೀಡಬೇಕು ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಹೇಳಿದರು.