ಗಣಪತಿ ಬಪ್ಪಾ ಮೋರಯಾ: ಕಳೆಗಟ್ಟಿದ ಸಂಭ್ರಮ

KannadaprabhaNewsNetwork |  
Published : Sep 09, 2024, 01:35 AM IST
8ಎಚ್‌ಪಿಟಿ1- ಹೊಸಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಹಿಂದೂ ಮಹಾಗಣಪತಿ. | Kannada Prabha

ಸಾರಾಂಶ

ಸಂಭ್ರಮದ ಗಣೇಶೋತ್ಸವಕ್ಕೆ ಸಾಕ್ಷಿಯಾದ ಚಿಣ್ಣರು, ಯುವಕರು ಕುಣಿದು ಕುಪ್ಪಳಿಸಿ ಗಣೇಶನನ್ನು ಬರಮಾಡಿಕೊಂಡರು.

ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಶನಿವಾರ ಸಂಜೆ ಗಣಪತಿ ಬಪ್ಪಾ ಮೋರಯಾ, ಮಂಗಳ ಮೂರ್ತಿ ಮೋರಯಾ ಎಂಬ ಘೋಷಣೆಯೊಂದಿಗೆ ಗಣಪತಿ ಮೂರ್ತಿಯನ್ನು ವಿನಾಯಕ ಮಂಡಳಿ ಸಮಿತಿಗಳ ಸದಸ್ಯರು ಪ್ರತಿಷ್ಠಾಪಿಸಿದರು. ಜಿಲ್ಲೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಸಂಭ್ರಮದ ಗಣೇಶೋತ್ಸವಕ್ಕೆ ಸಾಕ್ಷಿಯಾದ ಚಿಣ್ಣರು, ಯುವಕರು ಕುಣಿದು ಕುಪ್ಪಳಿಸಿ ಗಣೇಶನನ್ನು ಬರಮಾಡಿಕೊಂಡರು. ವಿಜಯನಗರ ಜಿಲ್ಲೆಯಲ್ಲಿ 13 ದಿನಗಳವರೆಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಮೂರನೇ ದಿನ 1287, ಐದನೇ ದಿನ 429, 7ನೇ ದಿನ 12, 9ನೇ ದಿನ 16, 11ನೇ ದಿನ 10 ಮತ್ತು 13ನೇ ದಿನ ಒಂದು ಗಣಪತಿ ವಿಸರ್ಜನೆ ಮಾಡಲಾಗುತ್ತದೆ. ಬೆಳಗ್ಗೆಯಿಂದ ಗಣೇಶ ಪ್ರತಿಷ್ಠಾಪನೆಗಾಗಿ ಮೆರವಣಿಗೆಗಳು ಆರಂಭಗೊಂಡವು. ಯುವಕರ ತಂಡಗಳು ಟ್ರ್ಯಾಕ್ಟರ್‌, ಟ್ರಕ್‌ಗಳಲ್ಲಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಗಳನ್ನು ಬರಮಾಡಿಕೊಂಡರು.

ಗಣೇಶನ ಪ್ರತಿಷ್ಠಾಪನೆ:

ನಗರದಾದ್ಯಂತ ಮನೆ, ಮನೆಗಳಲ್ಲಿ ಗಣೇಶನನ್ನು ಸ್ಥಾಪಿಸಲಾಯಿತು. ಮೂರ್ತಿ ಮಾರಾಟಗಾರರ ಮನೆಗಳು, ಅಂಗಡಿಗಳಲ್ಲಿ ಭಾರೀ ಜನಜಂಗುಳಿ ಕಂಡು ಬಂದಿತು. ಗಣೇಶನ ಮೂರ್ತಿಗೆ ತಿಲಕವಿರಿಸಿದ ಜನರು ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆಯೊಂದಿಗೆ ಮನೆಗೆ ಕರೆತಂದರು. ಪಟಾಕಿಗಳು, ಆಟಂ ಬಾಂಬ್‌ಗಳ ಸಿಡಿತ ಜೋರಾಗಿ ಕೇಳಿಬಂದಿತು. ವಿವಿಧ ಸಾರ್ವಜನಿಕ ಗಣೇಶ ಮಂಡಳಿಗಳು ಅನ್ನ ಸಂತರ್ಪಣೆ ಆಯೋಜಿಸಿದ್ದವು. ಒಂದು ದಿನ ಮಾತ್ರ ಸ್ಥಾಪಿಸಲಾಗುವ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ನಗರದಲ್ಲಿ ಸಂಜೆ ಕೈಗೊಳ್ಳಲಾಯಿತು. ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಜಿಲ್ಲಾದ್ಯಂತ ಪಿಒಪಿ ಗಣೇಶ ಮೂರ್ತಿ ನಿಷೇಧಿಸಿದ್ದರಿಂದ ಜಿಲ್ಲಾಡಳಿತದ ಪ್ರಯತ್ನಕ್ಕೆ ಬಹುತೇಕ ಯಶಸ್ಸು ದೊರೆಯಿತು. ಹಬ್ಬದ ಒಂದು ತಿಂಗಳು ಮೊದಲೇ ಜಿಲ್ಲಾಡಳಿತ ಪಿಒಪಿ ಮೂರ್ತಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಹೀಗಾಗಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಯಿತು. ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೆರೆದರು.

ಪೊಲೀಸರು ಕೂಡ ಸೂಕ್ತ ಬಂದೋಬಸ್ತ್‌ಗೆ ವ್ಯವಸ್ಥೆ ಕೈಗೊಂಡಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ