ಬಳ್ಳಾರಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಏಕಾಗ್ರತೆ, ಸ್ಮರಣಶಕ್ತಿ, ಆತ್ಮವಿಶ್ವಾಸ ಹಾಗೂ ಸೂಕ್ಷ್ಮ ಗ್ರಹಣಶಕ್ತಿಯನ್ನು ಬೆಳೆಸುವ ಉದ್ದೇಶದಿಂದ ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ಗಾಂಧಾರಿ ವಿದ್ಯೆ ಸ್ಪರ್ಧೆ–2026’ ಯಶಸ್ವಿಯಾಗಿ ನಡೆಯಿತು.
ಯೋಗ ಹಾಗೂ ಗಾಂಧಾರಿ ವಿದ್ಯೆ ತರಬೇತುದಾರ, ಕುರೇಕುಪ್ಪದ ಎಸ್‌ಆರ್‌ಕೆ ಯೋಗ ಕೇಂದ್ರದ ರಾಘವೇಂದ್ರ ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದಲ್ಲ. ಮಕ್ಕಳಲ್ಲಿ ಉತ್ತಮ ಮೌಲ್ಯಗಳು, ಶಿಸ್ತು, ಏಕಾಗ್ರತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಪ್ರಕ್ರಿಯೆಯಾಗಿದೆ. ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿದಾಗ ಅವರ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಬಸವರಾಜ್ ಬಿಸಲಹಳ್ಳಿ, ಗಾಂಧಾರಿ ವಿದ್ಯೆಯಂತಹ ವಿಶಿಷ್ಟ ತರಬೇತಿ ಹಾಗೂ ಸ್ಪರ್ಧೆಗಳು ಮಕ್ಕಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿವೆ. ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸವಾಲುಗಳನ್ನು ಎದುರಿಸುವ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.ಸಂಡೂರು–ಬಳ್ಳಾರಿಯ ಗಾಂಧಾರಿ ವಿದ್ಯೆ ತರಬೇತುದಾರರಾದ ಉಮಾ ಗಡಿಗಿ ಹಾಗೂ ಬಳ್ಳಾರಿಯ ಶ್ರೀ ಶಂಕರಾಚಾರ್ಯ ಚೈತನ್ಯ ವೇದಿಕೆಯ ಯೋಗ ಮತ್ತು ಗಾಂಧಾರಿ ವಿದ್ಯೆ ತರಬೇತುದಾರ ಕೆ. ಚಿದಂಬರ ರಾವ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ 68 ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಿರಿಯರು ಮತ್ತು ಕಿರಿಯರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ, ವಿಜೇತರನ್ನು ಆಯ್ಕೆ ಮಾಡಲಾಯಿತು. ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಉಳಿದ ಸ್ಪರ್ಧಿಗಳಿಗೂ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.