ಕನ್ನಡಪ್ರಭ ವಾರ್ತೆ ಅಥಣಿ
ಪಕ್ಷ, ಜಾತಿ ಭೇದವಿಲ್ಲದೆ ಸಾರ್ವಜನಿಕರು ಮತ್ತು ಶಾಲಾ ಕಾಲೇಜಿನ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಮತ್ತು ಸುಧಾರಿತ ಕೃಷಿ ಪದ್ಧತಿ, ಸಂಸ್ಕಾರ ಶಿಬಿರಗಳು ಸೇರಿದಂತೆ ಪ್ರತಿಯೊಬ್ಬರ ಬದುಕಿಗೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಿಂತನ-ಮಂಥನ ಕಾರ್ಯಕ್ರಮ ನಡೆಸುವ ಸದುದ್ದೇಶದಿಂದ ಮಹಾತ್ಮ ಗಾಂಧೀಜಿ ಗ್ರಾಮೀಣ ಗುರುಕುಲವನ್ನು ಅಥಣಿ ಪಟ್ಟಣದ ಹೊರವಲಯದಲ್ಲಿ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಪ್ರಸಿದ್ಧ ಅಂಕಣಕಾರ, ಸಾಮಾಜಿಕ ಚಿಂತಕ ಸುಧೀಂದ್ರ ಕುಲಕರ್ಣಿ ಹೇಳಿದರು.ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.21 ಮತ್ತು 22ರಂದು ತಾಲೂಕಿನ ತಂಗಡಿ-ಶಿನಾಳ ರಸ್ತೆಯಲ್ಲಿರುವ ಸಂಪದಾ ವಿಹಾರದಲ್ಲಿ ಪ್ರಮುಖ ಚಿಂತನ ಮಂಥನ ಗೋಷ್ಠಿಗಳ ಮೂಲಕ ಗುರುಕುಲದ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ನಾವೆಲ್ಲ ಅಥಣಿಯವರು. ಕಾರಣಾಂತರಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಸದ್ಯ ವಾಸ ಮಾಡುತ್ತಿದ್ದರೂ ಕೂಡ ನಮಗೆ ಅನ್ನ, ಶಿಕ್ಷಣ, ಪ್ರೀತಿ, ಬಾಂಧವ್ಯ, ಆಶ್ರಯ ಕೊಟ್ಟ ಅಥಣಿ ಮತ್ತು ಗ್ರಾಮೀಣ ಭಾಗದ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ ಮತ್ತು ಕೃತಜ್ಞತಾ ಭಾವದಿಂದ ಗಾಂಧಿ ಗ್ರಾಮೀಣ ಗುರುಕುಲ ಸಮಾಜೋಪಯೋಗಿ ಸೇವಾ ಸಂಸ್ಥೆ ಪ್ರಾರಂಭಿಸುವ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು.ಗಾಂಧಿ ಗ್ರಾಮೀಣ ಗುರುಕುಲ ಮೂಲಕ ನಮ್ಮ ಮನೆತನದ 34 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಸುವುದನ್ನು ಬಿಟ್ಟು ಅಥಣಿ ವ್ಯಾಪ್ತಿಯ ಸಂಪದಾ ವಿಹಾರ ಹಾಗೂ ಅಥಣಿ ಗ್ರಾಮೀಣ ಭಾಗದಲ್ಲಿರುವ ರಘುವೀರ ವಿಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ವೃಕ್ಷಾರೋಪಣ ಮಾಡುವ ಮೂಲಕ ತಪೋವನ ನಿರ್ಮಿಸಿದ್ದೇವೆ. ಜೊತೆಗೆ ಸರ್ವಧರ್ಮ ಪ್ರಾರ್ಥನೆ ಮತ್ತು ಧ್ಯಾನ ಮಂದಿರ ಸಹ ನಿರ್ಮಿಸಿದ್ದೇವೆ. ಈ ಗುರುಕುಲದ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ, ಆಧ್ಯಾತ್ಮ, ಗ್ರಾಮಗಳ ಉದ್ಧಾರ, ಗ್ರಾಮೀಣ ಕಲೆ, ಸಂಸ್ಕೃತಿಯ ಸಂವರ್ಧನೆ, ಪರಿಸರಸ್ನೇಹಿ ಜೀವನ, ಮಕ್ಕಳಿಗೆ ನೈತಿಕ ಶಿಕ್ಷಣ, ಶಿಕ್ಷಕರಿಗೆ ತರಬೇತಿ ಕಾರ್ಯಗಾರ, ಸುಧಾರಿತ ಕೃಷಿಗಾಗಿ ರೈತರಿಗೆ ತರಬೇತಿ, ಅಸ್ಪ್ರಶ್ಯತೆ ನಿವಾರಣೆ, ಮಹಿಳಾ ಸಬಲೀಕರಣ, ಎಲ್ಲ ಜಾತಿ, ಧರ್ಮಗಳಲ್ಲಿ ಭಾವೈಕ್ಯತೆಯ ಮೂಲಕ ವಿಶ್ವ ಶಾಂತಿಗೆ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿದರು.
ಡಿ. 21ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕುರಿತು ಹಿರಿಯ ಪತ್ರಕರ್ತ ಮನೋಜಗೌಡ ಪಾಟೀಲ, ಸಂಜೆ 4.30ಕ್ಕೆ 2ನೇ ಗೋಷ್ಠಿಯಲ್ಲಿ ಇಂದಿನ ಯುವ ಜನತೆ-ಸವಾಲುಗಳು ಮತ್ತು ಅವಕಾಶಗಳ ಕುರಿತು ಧಾರವಾಡದ ಪರಿಸರ ಚಿಂತಕ ಪಿ.ವಿ. ಹಿರೇಮಠ ಮಾತನಾಡುವರು. ಸಂಜೆ 6 ಗಂಟೆಗೆ ಶೃಂಗೇರಿಯ ಏಕತಾರಿ ಗಾಯಕ ನಾದ ಮಣಿನಾಲ್ಕೂರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಡಿ.22ರಂದು ಬೆಳಗ್ಗೆ 10 ಗಂಟೆಗೆ ಗಾಂಧಿ ದೃಷ್ಟಿಯಲ್ಲಿ ಜಾತಿ, ಧರ್ಮದ ಕುರಿತು ಕರ್ನಾಟಕ ಧಾರವಾಡ ವಿವಿಯ ಗಾಂಧಿ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಶಿವಾನಂದ ಶೆಟ್ಟರ, ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಗಾಂಧಿ ದೃಷ್ಟಿಯಲ್ಲಿ ಗ್ರಾಮೋದ್ಧಾರ ವಿಷಯ ಕುರಿತು ಧಾರವಾಡದ ಪರಿಸರ ಚಿಂತಕ ಡಾ.ಪ್ರಕಾಶ ಭಟ್ ಮತ್ತು ಚರಖಾ ಏಕೆ..? ಈಗ ಏಕೆ..? ವಿಷಯದ ಕುರಿತು ಧಾರವಾಡದ ಡಾ.ಸಂಜೀವ ಕುಲಕರ್ಣಿ, ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಮತ್ತು ನಾಳೆಯ ಜಗತ್ತು ಕುರಿತಾಗಿ ಯು.ಎಸ್.ಎನ್. ಮಿಂಚು ಕುಲಕರ್ಣಿ ಮಾತನಾಡುವರು. ಸಂಜೆ 4 ಗಂಟೆಗೆ ಅಥಣಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ನಡೆದಿರುವ ಉತ್ತಮ ಶೈಕ್ಷಣಿಕ ಉಪಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಸಂಜೆ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು. ಹಿರಿಯ ವಕೀಲ ಸುಹಾಸ ದಾತಾರ, ಡಾ.ಕಾಮಾಕ್ಷಿ ಭಾಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.ಗುರುಕುಲದ ಮೂಲಕ ನಿರ್ಲಕ್ಷ್ಯಕ್ಕೊಳಪಟ್ಟ ಶಿಶು ಶಿಕ್ಷಣದ ಜಾಗೃತಿ ಮೂಡಿಸಿ ಅಂಗನವಾಡಿಗಳ ಅಭಿವೃದ್ಧಿಗಾಗಿ ಗುರುಕುಲದಿಂದ ಸಣ್ಣ ಪ್ರಯತ್ನ ಮಾಡುತ್ತೇವೆ. ಜೊತೆಗೆ ರೈತರಿಗೆ ಆಧುನಿಕ ಮತ್ತು ಪಾರಂಪರಿಕ ಕೃಷಿ ವಿಧಾನ ಕುರಿತು ತರಬೇತಿ ಸಹ ನೀಡಲಾಗುವುದು.ವಿವಿಧ ವಿಚಾರಗಳಿಂದ ಪ್ರೇರಣೆ ಪಡೆದು ಸಮಾಜೋನ್ನತಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವ ಎಲ್ಲ ಸಜ್ಜನ ಶಕ್ತಿಗಳನ್ನು ನಮ್ಮ ಗುರುಕುಲ ಸಂಸ್ಥೆ ಗೌರವಿಸುತ್ತದೆ ಎಂದು ಹೇಳಿದರು.
- ಸುಧೀಂದ್ರ ಕುಲಕರ್ಣಿ ಅಂಕಣಕಾರ, ಸಾಮಾಜಿಕ ಚಿಂತಕ