ಗಾಂಧಿ ಸಿದ್ಧಾಂತ ಕಾಂಗ್ರೆಸ್‌ನಿಂದ ಗಾಳಿಗೆ: ಆರ್.ಅಶೋಕ್

KannadaprabhaNewsNetwork |  
Published : Jan 12, 2026, 01:45 AM IST
11ಕೆಎಂಎನ್ ಡಿ11 | Kannada Prabha

ಸಾರಾಂಶ

ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯನ್ನು ಉದ್ಘಾಟನೆ ಮಾಡಿದ್ದು ನಾನು. ಈಗ ಅದನ್ನು ಉಳಿಸಿಕೊಳ್ಳುವುದಕ್ಕೆ ನಾನೇ ಬಂದಿದ್ದೇನೆ. ಗಾಂಧೀಜಿಯವರ ಗ್ರಾಮಸ್ವರಾಜ್ಯ, ರಾಮರಾಜ್ಯ, ಪಂಚಾಯತ್‌ ರಾಜ್ ಕಲ್ಪನೆಗಳನ್ನೆಲ್ಲಾ ಕಾಂಗ್ರೆಸ್‌ನವರೇ ಬುಡಮೇಲು ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರತಿ ಹಳ್ಳಿಯೂ ಸ್ವಾವಲಂಬಿಯಾಗಿ ತನ್ನದೇ ಆಡಳಿತ ಹೊಂದಿರುವ ಗಣರಾಜ್ಯವಾಗಿರಬೇಕೆಂಬ ಗಾಂಧಿ ಸಿದ್ಧಾಂತವನ್ನೇ ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದೆ. ಗ್ರಾಮಗಳನ್ನು ನಾಶ ಮಾಡಿ ನಗರೀಕರಣ ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯನ್ನು ಸೇರಿಸಿರುವುದನ್ನು ವಿರೋಧಿಸಿ ಕಳೆದ ಹದಿನೈದು ದಿನಗಳಿಂದ ಗೆಜ್ಜಲಗೆರೆಯಲ್ಲಿ ಗ್ರಾಮಸ್ಥರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯನ್ನು ಉದ್ಘಾಟನೆ ಮಾಡಿದ್ದು ನಾನು. ಈಗ ಅದನ್ನು ಉಳಿಸಿಕೊಳ್ಳುವುದಕ್ಕೆ ನಾನೇ ಬಂದಿದ್ದೇನೆ. ಗಾಂಧೀಜಿಯವರ ಗ್ರಾಮಸ್ವರಾಜ್ಯ, ರಾಮರಾಜ್ಯ, ಪಂಚಾಯತ್‌ ರಾಜ್ ಕಲ್ಪನೆಗಳನ್ನೆಲ್ಲಾ ಕಾಂಗ್ರೆಸ್‌ನವರೇ ಬುಡಮೇಲು ಮಾಡುತ್ತಿದ್ದಾರೆ ಎಂದು ಜರಿದರು.

ತೆರಿಗೆ ವಸೂಲಿಯನ್ನು ಗಮನದಲ್ಲಿಟ್ಟುಕೊಂಡೇ ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ನಗರಸಭೆಗೆ ಸೇರಿದರೆ ಅದರಿಂದ ಜನರಿಗೆ ಏನೂ ಉಪಯೋಗವಿಲ್ಲ. ಬೆಂಗಳೂರಿನಲ್ಲಿ ಬೆಳವಣಿಗೆ ಆಗಿದೆ. ಅದಕ್ಕೆ ಅದನ್ನು ನಗರೀಕರಣ ಮಾಡಲಾಗಿದೆ. ಆದರೆ, ಇಲ್ಲಿ ಹೊಲ-ಗದ್ದೆಗಳು ಇವೆ. ನಗರಸಭೆಗೆ ಸೇರಿದರೆ ತೆರಿಗೆ ಏರಿಕೆಯಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದರಿಂದ ಹಳ್ಳಿಗಳ ಉದ್ಧಾರ ಆಗುವುದಿಲ್ಲ, ವ್ಯವಸ್ಥೆ ಮತ್ತಷ್ಟು ಹಾಳಾಗುತ್ತದೆ. ಹಳ್ಳಿಗಳು ಹಳ್ಳಿಗಳಾಗಿಯೇ ಉಳಿದರೆ ಸರ್ಕಾರ ಖುಷಿಪಡಬೇಕು. ಎಲ್ಲವನ್ನ್ನೂ ಪಟ್ಟಣ ಮಾಡಿದರೆ ಅನ್ನಕ್ಕೆ ಏನು ಮಾಡೋದು. ಆಹಾರ ಎಲ್ಲಿ ಉತ್ಪಾದನೆ ಮಾಡೋದು. ನಗರೀಕರಣದಿಂದ ಮುಂದೆ ಆಗುವ ಅನಾಹುತಗಳ ಬಗ್ಗೆ ಯೋಚನೆ ಮಾಡಬೇಕು ಎಂದರು.

ಚುನಾಯಿತ ಪ್ರತಿನಿಧಿಗಳು ದುರಹಂಕಾರದಲ್ಲಿ ಮಾತನಾಡಬಾರದು. ಜನರ ಕಷ್ಟಗಳಿಗೆ ಸ್ಪಂದಿಸಬೇಕು, ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ನಗರಸಭೆಗೆ ಸೇರುವುದಕ್ಕೆ ಗ್ರಾಮಸ್ಥರೇ ಬೇಡ ಎನ್ನುತ್ತಿರುವಾಗ ಬಲವಂತವಾಗಿ ಸೇರ್ಪಡೆ ಮಾಡುವುದೇಕೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡುವುದು ಸರ್ಕಾರ, ಜನಪ್ರತಿನಿಧಿಗಳ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದರು.

ಗ್ರಾಮಸ್ಥರು ನಡೆಸುತ್ತಿರುವ ಚಳವಳಿಗೆ ನಮ್ಮ ಬೆಂಬಲವಿದೆ. ಜನರು ತಿರುಗಿ ಬಿದ್ದರೆ ಯಾರೂ ಉಳಿಯುವುದಿಲ್ಲ. ಮೊದಲು ಜನರ ಅಭಿಪ್ರಾಯವನ್ನು ಗೌರವಿಸಿ. ಗೆಜ್ಜಲಗೆರೆಯನ್ನು ನಗರಸಭೆಯಿಂದ ಕೈ ಬಿಡುವಂತೆ ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಜನಗಳ ಭಾವನೆಗೆ ದ್ರೋಹ ಬಗೆದಿದ್ದಾರೆ. ಕಾಂಗ್ರೆಸ್ ಅಧಿಕಾರದ ಮದವನ್ನ ವಿರೋಧ ಪಕ್ಷ ಇಳಿಸುತ್ತಿದೆ. ಈ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಹಳ್ಳಿಗಳ ನಾಶ ಮಾಡಲು ಹೊರಟಿದ್ದಾರೆ. ಗ್ರಾಮೀಣ ವಾತಾವರಣದಲ್ಲಿ ಜನರು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ. ಗ್ರಾಮ ಗ್ರಾಮವಾಗಿಯೇ ಉಳಿಯಲು ಬಿಡಿ. ಈ ತೀರ್ಮಾನ ಕಾಂಗ್ರೆಸ್‌ಗೆ ನಾಚಿಕೆ ತರುವ ತೀರ್ಮಾನ. ತಕ್ಷಣವೇ ಈ ನಿರ್ಧಾರ ಕೈ ಬಿಡುವಂತೆ ಒತ್ತಾಯಿಸಿದರು.

ಜನರ ಪರವಾಗಿ ದನಿ ಎತ್ತುವುದಕ್ಕೇ ವಿರೋಧಪಕ್ಷ ಇರೋದು. ಕಾಂಗ್ರೆಸ್ ನವರು ಅಧಿಕಾರದ ಮದದಿಂದ ಮೆರೆಯುತ್ತಾರೆ. ಅದನ್ನ ನಾವು ಇಳಿಸುತ್ತೇವೆ ಎಂದು ಗುಡುಗಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ಮುಖಂಡರಾದ ಎಸ್.ಸಚ್ಚಿದಾನಂದ, ಎಸ್.ಪಿ.ಸ್ವಾಮಿ, ಅಶೋಕ್ ಜಯರಾಂ, ಯಮದೂರು ಸಿದ್ದರಾಜು, ರೈತ ನಾಯಕಿ ಸುನಂದಾ ಜಯರಾಂ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ