ದೊಡ್ಡಬಳ್ಳಾಪುರ: ಮಹಾತ್ಮ ಗಾಂಧೀಜಿ ಅವರ ಕುರಿತು ಪಠ್ಯ ಪುಸ್ತಕಗಳನ್ನು ಓದಿದರೆ ಸಾಲದು ಅವರ ಆದರ್ಶ, ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧಿ ತತ್ವಾದರ್ಶಗಳ ಪಾಲನೆ ಸುಸ್ಥಿರ ಅಭಿವೃದ್ಧಿಗೆ ಪೂರಕ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಹೇಳಿದರು.
ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಜಗತ್ತಿಗೆ ಪರಿಚಯಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಮಹಿಳೆಯರಿಗೆ ಪ್ರೊತ್ಸಾಹ ನೀಡಿದರು. ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದರು. ಅವರ ಸತ್ಯ, ಅಹಿಂಸೆ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಬಳಸುವುದು ದೇಶದ ಬಡವರ ಉದ್ದಾರಕ್ಕೆ ಮತ್ತು ಆರ್ಥಿಕ ಸ್ವಾವಲಂಬನೆಗೆ ದಾರಿ ಎಂದು ನಂಬಿದ್ದರು. ಸತ್ಯವೇ ದೇವರೆಂದು ನಂಬಿದ್ದ ಅವರು ಮಾತು ಮತ್ತು ಕೃತಿಯಲ್ಲಿ ಸತ್ಯವನ್ನು ಪಾಲಿಸಬೇಕೆಂದು ಹೇಳಿದರು.
ಜಿಪಂ ಸಿಇಒ ಡಾ.ವಾಸಂತಿ ಅಮರ್ ಮಾತನಾಡಿ, ಗಾಂಧೀಜಿಯವರ ತತ್ವಗಳನ್ನು ಮಕ್ಕಳು ಬೆಳೆಸಿಕೊಂಡು ನಡೆನುಡಿಯಲ್ಲಿ ಪ್ರಾಮಾಣಿಕರಾಗಿ, ವಿದ್ಯಾವಂತರಾಗಿ, ಗುಣವಂತರಾಗಬೇಕು ಎಂದು ತಿಳಿಸಿದರು.ಶಿಕ್ಷಕ ಬಸವರಾಜು ಉಪನ್ಯಾಸ ನೀಡಿ, ಮಹಾತ್ಮ ಗಾಂಧೀಜಿಯವರು ಜೀವನದುದ್ದಕ್ಕೂ ಸತ್ಯ, ಸರಳತೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಿದ್ದರು. ಗಾಂಧೀಜಿಯವರ ಬದುಕು ತೆರದ ಪುಸ್ತಕ. ಗಾಂಧೀಜಿ ಅವಮಾನವನ್ನು ಕಡೆಗಣಿಸಿ ಸಾಧನೆಯ ಮಟ್ಟಿಲು ಏರಿದ ಮಹಾನ್ ಚೈತನ್ಯ ಎಂದು ಹೇಳಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ಸರಳ, ಪ್ರಾಮಾಣಿಕ ವ್ಯಕ್ತಿತ್ವದವರಾಗಿದ್ದರು. ಮುಗ್ದ ಚೇತನ ಅವರ ಆದರ್ಶಗಳನ್ನು ನಾವು ಪಾಲನೆ ಮಾಡಬೇಕು ಎಂದು ತಿಳಿಸಿದರು.
2ಕೆಡಿಬಿಪಿ2-