ಗಾಂಧೀಜಿ ಆದರ್ಶ ವ್ಯಕ್ತಿತ್ವದ ವಿಶ್ವನಾಯಕ: ವಾಮದೇವಪ್ಪ

KannadaprabhaNewsNetwork | Published : Oct 3, 2024 1:17 AM

ಸಾರಾಂಶ

ಮಹಾತ್ಮ ಗಾಂಧೀಜಿ ಅವರು ಆದರ್ಶಮಯ ವ್ಯಕ್ತಿತ್ವ ಹೊಂದಿದ್ದ ವಿಶ್ವನಾಯಕರಾಗಿದ್ದರು. ಈಗಲೂ ವಿಶ್ವಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಗಾಂಧೀಜಿ ಅನುಯಾಯಿಗಳಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ.

- ಕುವೆಂಪು ಕನ್ನಡ ಭವನದಲ್ಲಿ ಮಹಾತ್ಮ ಗಾಂಧಿ- ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾತ್ಮ ಗಾಂಧೀಜಿ ಅವರು ಆದರ್ಶಮಯ ವ್ಯಕ್ತಿತ್ವ ಹೊಂದಿದ್ದ ವಿಶ್ವನಾಯಕರಾಗಿದ್ದರು. ಈಗಲೂ ವಿಶ್ವಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಗಾಂಧೀಜಿ ಅನುಯಾಯಿಗಳಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿದ್ಯಾ ನಗರ ಲಯನ್ಸ್ ಕ್ಲಬ್, ವಿನೂತನ ಮಹಿಳಾ ಸಮಾಜದ ಆಶ್ರಯದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 155ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ರಿಟಿಷರನ್ನು ಎದುರಿಸಲು ಸತ್ಯಾಗ್ರಹ, ವಿದೇಶಿ ವಸ್ತುಗಳಿಗೆ ಬಹಿಷ್ಕಾರ, ಸ್ವದೇಶಿ ವಸ್ತುಗಳಿಗೆ ಮನ್ನಣೆ, ಗ್ರಾಮೀಣ ಸ್ವಾವಲಂಬನೆ, ಅಸ್ಪೃಶ್ಯತೆಯ ನಿವಾರಣೆ, ಮದ್ಯಪಾನ ನಿಷೇದ, ದೇಶೀ ಭಾಷೆಗಳಿಗೆ ಉತ್ತೇಜನ ನೀಡುವುದು ಇವೇ ಮೊದಲಾದ ವಿಧಾಯಕ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದರು. ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ, ಅಸಹಕಾರ ಚಳವಳಿ, ಕಾಯಿದೆ ಭಂಗ ಹೋರಾಟ, ಆಮರಣಾಂತ ಉಪವಾಸ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಚಳವಳಿ ಮೊದಲಾದ ವಿವಿಧ ಹಂತಗಳ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ‍್ಯ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಇಂಥ ಗಾಂಧೀಜಿ ನಮಗೆಲ್ಲರಿಗೂ ಆದರ್ಶವಾಗಬೇಕು ಎಂದು ತಿಳಿಸಿದರು.

ವಿದ್ಯಾನಗರ ಲಯನ್ಸ್ ಕ್ಲಬ್‌ ಅಧ್ಯಕ್ಷ ಎಸ್.ಎಲ್. ಪ್ರಭುದೇವ್ ಮಾತನಾಡಿ, ನೆಲ್ಸನ್ ಮಂಡೇಲಾ ಕೂಡ ಗಾಂಧೀಜಿಯವರು ನನ್ನ ಜೀವನಕ್ಕೆ ಪ್ರೇರಣೆ ಆಗಿದ್ದರು ಎಂದು ಹೇಳುತ್ತಿದ್ದರು. ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ತಿಳಿದಿದ್ದರೆ ಸಾಲದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿನೂತನ ಮಹಿಳಾ ಸಮಾಜ ಉಪಾಧ್ಯಕ್ಷೆ ಶೈಲಜಾ ತಿಮ್ಮೇಶ್ ಮಾತನಾಡಿದರು. ಲಯನ್ಸ್ ಮಾಜಿ ಗವರ್ನರ್ ಡಾ. ಜಿ.ಶಿವಲಿಂಗಪ್ಪ, ವಿನೂತನ ಮಹಿಳಾ ಸಮಾಜ ಅಧ್ಯಕ್ಷೆ ರೇಖಾ ಓಂಕಾರಪ್ಪ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಗೌರವ ಕೋಶಾಧ್ಯಕ್ಷ, ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ, ಬಾ.ಮ. ಬಸವರಾಜಯ್ಯ, ರಂಗ ಸಂಘಟಕ ಎನ್.ಎಸ್. ರಾಜು, ಸತ್ಯಭಾಮ ಮಂಜುನಾಥ್, ಎಚ್.ಎನ್. ಶಿವಕುಮಾರ್, ಬಕ್ಕೇಶ ನಾಗನೂರು, ಸುದರ್ಶನ್ ಕುಮಾರ್, ಕೋಮಲ್ ಕುಮಾರ್, ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.

ವಿನೂತನ ಮಹಿಳಾ ಸಮಾಜದ ಸದಸ್ಯೆಯರು ರಾಷ್ಟ್ರಗೀತೆ, ನಾಡಗೀತೆ ಹಾಗೂ ಸರ್ವಧರ್ಮ ಪ್ರಾರ್ಥನೆ ಪ್ರಸ್ತುತಪಡಿಸಿದರು.

- - - -2ಕೆಡಿವಿಜಿ39ಃ:

ದಾವಣಗೆರೆಯಲ್ಲಿ ಕಸಾಪ, ಲಯನ್ಸ್ ಕ್ಲಬ್, ವಿನೂತನ ಮಹಿಳಾ ಸಮಾಜದ ಸಹಯೋಗದಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.

Share this article