ಕನ್ನಡಪ್ರಭ ವಾರ್ತೆ ಪುತ್ತೂರು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ದೇಶದ ಸ್ವಾತಂತ್ರಕ್ಕೆ ಕಾರಣರಾಗುವ ಜತೆಗೆ ದೇಶದ ಆಡಳಿತಕ್ಕೆ ನಿಯಮಗಳನ್ನು ರೂಪಿಸಿದ ಗಾಂಧೀಜಿ ಅವರ ತತ್ವಗಳ ಮೂಲಕ ನಮ್ಮ ನಡುವೆ ಇಂದಿಗೂ ಜೀವಂತವಾಗಿದ್ದಾರೆ. ದೇಶದ ಅಭಿವೃದ್ಧಿ, ಜನರ ಅಭಿವೃದ್ಧಿಗಾಗಿ ಪ್ರಜೆಗಳು ಕೆಲಸ ಮಾಡಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.ಅವರು ಮಹಾತ್ಮ ಗಾಂಧೀಜಿ ಅವರ ಹುತಾತ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಗಾಂಧಿ ಕಟ್ಟೆಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾರಾರ್ಪಣೆ ಮಾಡಿ ಸಂದೇಶ ನೀಡಿದರು. ಗಾಂಧೀಜಿ ಅವರು ಇಡೀ ದೇಶದ ವ್ಯವಸ್ಥೆಯನ್ನು ಬದಲಾವಣೆಗೊಳಿಸಲು ಪ್ರೇರಣೆಯಾದರು. ಚುನಾವಣಾ ವ್ಯವಸ್ಥೆ, ಪಂಚಾಯತ್‌ರಾಜ್ ವ್ಯವಸ್ಥೆಗಳನ್ನು ರೂಪಿಸಲು ಗಾಂಧೀಜಿ ಕಾರಣಕರ್ತರಾಗಿದ್ದಾರೆ. ನಾವು ಬಳಸುವ ನೋಟಿನಲ್ಲಿಯೂ ಗಾಂಧೀಜಿ ಇದ್ದಾರೆ. ಭ್ರಷ್ಟಾಚಾರಿಗಳು ಇದನ್ನು ಗಮನಿಸಬೇಕು. ಅವರ ಸತ್ಯ ಮತ್ತು ಅಹಿಂಸೆಯ ಮಾರ್ಗಗಳು ನಮ್ಮ ಬದುಕಿಗೆ ಪ್ರೇರಣೆಯಾಗಿದೆ. ಅವರೊಂದಿಗೆ ನೇತಾಜಿ ಸುಭಾಶ್ಚಂದ್ರ ಬೋಸ್, ಭಗತ್‌ಸಿಂಗ್, ವಲ್ಲಭಬಾಯಿ ಪಟೇಲ್, ಮನೋಜ್ ಪಾಂಡ್ಯ, ವಿಕ್ರಂ ಪಾತ್ರ ಹೀಗೆ ಹಲವಾರು ಮಂದಿಯ ತ್ಯಾಗ ಬಲಿದಾನವಿದೆ. ಅವರ ಆದರ್ಶದ ದಾರಿಯಲ್ಲಿ ನಾವು ನಡೆಯಬೇಕು ಎಂದು ಹೇಳಿದರು.
ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಗಾಂಧಿ ಕಟ್ಟೆ ಅಭಿವೃದ್ಧಿ ಸಮಿತಿ ಸಂಚಾಲಕ ಕೃಷ್ಣ ಪ್ರಸಾದ್ ಆಳ್ವ, ೧೯೩೪ ರಲ್ಲಿ ಪುತ್ತೂರಿಗೆ ಗಾಂಧೀಜಿಯವರ ಭೇಟಿಯ ನೆನಪಿನ ಗಾಂಧಿ ಕಟ್ಟೆಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರಿಗೆ ಗೌರವ ಸೂಚಿಸಲಾಗುತ್ತಿದೆ. ಗಾಂಧಿ ಕಟ್ಟೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಜೆ. ಶಿವಶಂಕರ್, ನಗರ ವೃತ್ತ ನಿರೀಕ್ಷಕ ಸುನಿಲ್ ಕುಮಾರ್, ಗಾಂಧಿಕಟ್ಟೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಮೇಶ್ ಬಾಬು, ಕಾರ್ಯದರ್ಶಿ ಸಯ್ಯದ್ ಕಮಾಲ್, ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ಶಂಕರ್ ಮತ್ತು ರುಕ್ಮಯ ಗೌಡ, ಪ್ರಕಾಶ್ ಪುರುಷರಕಟ್ಟೆ, ಸೀತಾರಾಮ ರೈ ಮತ್ತಿತರರು ಉಪಸ್ಥಿತರಿದ್ದರು. ಅಗ್ನಿಶಾಮಾಕ ದಳದ ವಾಹನದಲ್ಲಿ ೫ ನಿಮಿಷ ಸೈರನ್ ಮೊಳಗಿಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲಾಯಿತು. ಗಾಂಧಿಕಟ್ಟೆ ಸಮಿತಿ ಉಪಾಧ್ಯಕ್ಷ ಸುಬೇದಾರ್ ರಮೇಶ್ ಬಾಬು ಸ್ವಾಗತಿಸಿ, ವಂದಿಸಿದರು.