ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ವಿಶ್ವವಿದ್ಯಾಲಯ, ಕೊಡಗು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಗಾಂಧೀಜಿಯವರ ಆತ್ಮಕಥೆ ನೂರರ ಸಂಭ್ರಮ ಹಾಗೂ ಭೂದಾನ ಚಳವಳಿಯ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ಪುಸ್ತಕ ದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಇಂದು ಜಗತ್ತು ಒಂದು ಜಾಗತಿಕ ಹಳ್ಳಿಯಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳು ಕೂಡ ಮುಖ್ಯ. ಸಮಾಜದಲ್ಲಿ ದ್ವೇಷ ಭಾಷಣಗಳು, ಕೋಮುಗಲಭೆಗಳು ಹೆಚ್ಚುತ್ತಿವೆ. ಸತ್ಯ, ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಕಾಣುವುದು ಅಪರೂಪ ಎಂಬಂತಾಗಿದೆ. ಹೀಗಿರುವಾಗ ಹಿಂಸೆ ಕ್ಷಣಿಕ, ಅಹಿಂಸೆ ಮತ್ತು ಶಾಂತಿ ಶಾಶ್ವತ ಎಂಬ ಗಾಂಧೀಜಿಯವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂಬುದನ್ನು ನಾವೆಲ್ಲರೂ ಮರೆಯಬಾರದು ಎಂದು ಅವರು ತಿಳಿಸಿದರು.
ಆಡಂಬರದ ಜೀವನದಲ್ಲಿ ಮುಳುಗಿಹೋಗಿರುವ ಯುವಜನತೆಗೆ ಅತ್ಯಂತ ಸರಳ ಸುಂದರ ಜೀವನ ನಡೆಸಿದ ಗಾಂಧೀಜಿಯವರು ಆದರ್ಶಪ್ರಾಯರಾಗಿದ್ದಾರೆ. ವಿದ್ಯಾರ್ಥಿಗಳು ಗಾಂಧೀಜಿಯವರು ಹಾಕಿ ಕೊಟ್ಟ ಮೌಲ್ಯಗಳನ್ನು ನಿಮ್ಮ ಬದುಕಿನ ಬುನಾದಿಯಾಗಿ ಮಾಡಿಕೊಂಡರೆ ಯಶಸ್ವಿ ಜೀವನದ ಜೊತೆಗೆ ಸುಸ್ಥಿರ ಸಮಾಜವನ್ನು ನಾವು ಕಾಣಬಹುದಾಗಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪುಸ್ತಕ ದಾಸೋಹ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸುರೇಶ ಹೆಚ್ ಜಂಗಮಶೆಟ್ಟಿ ಅವರು ಮಾತನಾಡಿ, ಓದುವ ದಾಹ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಪುಸ್ತಕದ ಜ್ಞಾನ ಮಸ್ತಕಕ್ಕೆ ಅವಶ್ಯ ಎಂಬ ದೃಷ್ಟಿಯಿಂದ ಕೊಡಗು ವಿಶ್ವವಿದ್ಯಾಲಯ ಇಂದು ಪುಸ್ತಕ ದಾಸೋಹ ಆರಂಭಿಸಿರುವುದು ಅತ್ಯಂತ ಶ್ಲಾಘನೀಯ. ವಿದ್ಯಾರ್ಥಿಗಳೆಲ್ಲ ಈ ಪುಸ್ತಕ ದಾಸೋಹದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಜಗತ್ತಿಗೆ ಅನ್ನ ನೀಡುವ ಅನ್ನದಾತರಾದ ರೈತ, ನಮ್ಮ ಸುರಕ್ಷತೆಗಾಗಿ ದೇಶದ ಗಡಿಯಲ್ಲಿ ಕಾಯುತ್ತಿರುವ ಸೈನಿಕ, ನಮಗೆ ಜನ್ಮ ನೀಡಿದ ತಂದೆ ತಾಯಿ ಮತ್ತು ಶಿಕ್ಷಣ ನೀಡುವ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಮಾತನಾಡಿ, ತಮ್ಮದೇ ಆದ ತತ್ವಸಿದ್ದಾಂತಗಳ ಮೂಲಕ ವಿಶ್ವಖ್ಯಾತಿ ಹೊಂದಿದ ಮಹಾತ್ಮ ಗಾಂಧೀಜಿ ಅವರ ಚಿಂತನೆಗಳನ್ನು ಸರ್ವ ಕಾಲಕ್ಕೂ ಸ್ಮರಿಸುವ ಉದ್ದೇಶದಿಂದ ಕೊಡಗು ವಿಶ್ವವಿದ್ಯಾಲಯವು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಗಾಂಧೀಜಿಯ ಕನಸುಗಳು ಹಾಗೂ ಆಲೋಚನೆಗಳನ್ನು ಬಿತ್ತಲು ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ.
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.