ಕುಷ್ಟಗಿ: ಸತ್ಯ, ಅಹಿಂಸೆ, ಸರಳತೆ ಹಾಗೂ ಪ್ರಾಮಾಣಿಕತೆಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಪಾಲಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಆದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ ಎಂದು ಕಾಂಗ್ರೆಸ್ ಮುಖಂಡ ಲಾಡ್ಲೇಮಷಾಕ ದೋಟಿಹಾಳ ಹೇಳಿದರು.
ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿದರು. ಹಿಂಸೆ ಮಾರ್ಗ ಅನುಸರಿಸದೆ, ಜನರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಿದ ಅವರ ತತ್ವಗಳು ಇಂದಿಗೂ ವಿಶ್ವಕ್ಕೆ ಮಾದರಿಯಾಗಿವೆ ಎಂದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಸರಳ ಜೀವನ, ಪ್ರಾಮಾಣಿಕತೆ ಹಾಗೂ ದೇಶದ ಮೇಲಿನ ಬದ್ಧತೆಗೆ ಹೆಸರಾಗಿದ್ದರು. ಪ್ರಧಾನಿಯಾಗಿ ದೇಶದ ಕೃಷಿಕರು ಮತ್ತು ಸೈನಿಕರ ಮಹತ್ವ ಸಾರಿದ ಅವರು, ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಕರ್ತವ್ಯನಿಷ್ಠೆ ಹಾಗೂ ಸರಳ ಬದುಕು ಸಾರ್ವಜನಿಕ ಜೀವನದಲ್ಲಿರುವವರಿಗೆ ಆದರ್ಶವಾಗಬೇಕು ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ಮಾನಪ್ಪ ತಳವಾರ್, ಮೈನುದ್ದೀನ್ ಮುಲ್ಲಾ, ಶಕುಂತಲಮ್ಮ ಹಿರೇಮಠ, ಶಂಕ್ರಗೌಡ ಪಾಟೀಲ, ಹನುಮೇಶ ಗುಮಗೇರಿ, ಚನ್ನಬಸವ ಚೌರಿ, ಚಂದ್ರು ನಾಲತ್ವಾಡ, ದೊಡ್ಡಯ್ಯ ಗದ್ದಡಕಿ ಇದ್ದರು.
ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸಲಾಯಿತು.ಕೇಸೂರು ಪಿಡಿಒ ಕೆ. ವಾಗೀಶ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ ಹಾಗೂ ಸರಳ ಜೀವನದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರು ಸರಳತೆ, ಪ್ರಾಮಾಣಿಕತೆ ಹಾಗೂ ದೇಶಸೇವೆಯ ಆದರ್ಶಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಸ್ಮರಿಸಿದರು. ಇಬ್ಬರು ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.