ಕಂಪ್ಲಿ: ಗಂಡುಗಲಿ ಶರಣ ಎಂದರೇ ಅಂಬಿಗರ ಚೌಡಯ್ಯ. ಯಾವುದನ್ನು ಕ್ಷಣ ಮಾತ್ರಕ್ಕೆ ಒಪ್ಪಿಕೊಳ್ಳದೇ ಸತ್ಯದ ಪರವಾಗಿ ಸದಾ ನಿಂತವರು. ಅವರಲ್ಲಿದ್ದ ಜಾಣ್ಮೆ ಅಪಾರ. ಕಾಯಕವನ್ನೇ ಉಸಿರಾಗಿಸಿಕೊಂಡಿದ್ದ ಅನುಭಾವ ಜೀವಿ ಅವರಾಗಿದ್ದರು ಎಂದು ಕಂಪ್ಲಿ ತಾಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಎಲಿಗಾರ ನಾಗರಾಜ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.ಅಂಬಿಗರ ಚೌಡಯ್ಯ ಅವರು ಸಿದ್ಧಿಸಾಧಕ ನಿಜಶರಣರಾಗಿದ್ದರು. ಮೌಢ್ಯ, ಕಂದಾಚಾರ, ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ವಚನಗಳ ಮೂಲಕವೇ ಛಾಟಿ ಬೀಸಿರುವುದನ್ನು ಗಮನಿಸಬಹುದಾಗಿದೆ. ಪ್ರತಿಯೊಬ್ಬರೂ ಅಂಬಿಗರ ಚೌಡಯ್ಯ ಜೀವನ ಚರಿತ್ರೆ ಹಾಗೂ ಅವರ ವಚನಗಳನ್ನು ಓದಿ ತಿಳಿದುಕೊಳ್ಳುವ ಮೂಲಕ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸರ್ಕಾರ ಎಲ್ಲ ಅರ್ಹತೆ ಹೊಂದಿದ ಗಂಗಾಮತಸ್ಥರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು. ಇದಕ್ಕಾಗಿ ಪಟ್ಟಣದಿಂದ ಸೂಕ್ತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಆರ್. ಷಣ್ಮುಖ, ಶಿರಸ್ತೆದಾರ ಎಸ್.ಡಿ. ರಮೇಶ, ನಿಜಶರಣ ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಕರೇಕಲ್ ಪ್ರಕಾಶ, ಪ್ರಮುಖರಾದ ಅಯ್ಯೋದಿ ವೆಂಕಟೇಶ, ಬಿ. ಸಿದ್ದಪ್ಪ, ಕೆ. ಮನೋಹರ, ಬಿ. ಈರಪ್ಪ, ಬಿ. ವೀರಭದ್ರಪ್ಪ, ಕಟ್ಟೆ ಸಣ್ಣ ದುರುಗಪ್ಪ, ಎಸ್. ನಂದ್ಯೆಪ್ಪ, ಎಸ್. ಸುರೇಶ್, ಬಿ. ರಮೇಶ, ಯು. ವೆಂಕಟೇಶ, ಶೆರೆಗಾರ ರಾಜ, ಯು. ವಿರುಪಣ್ಣ, ಶಿವಕುಮಾರ, ಬಸವರಾಜ, ಅಯ್ಯೋದಿ ರಮೇಶ, ಇಟಗಿ ಈರಣ್ಣ, ಕಂದಾಯ ಅಧಿಕಾರಿಗಳಿದ್ದರು.ಇದಕ್ಕು ಮುನ್ನಾ ಕೋಟೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಜಯಂತ್ಯುತ್ಸವ ಆಚರಿಸಲಾಯಿತು. ಮಾರುತಿ ನಗರದಲ್ಲಿ ಅಂಬಿಗರ ಚೌಡಯ್ಯ ವೃತ್ತದ ನಾಮಫಲಕ ಉದ್ಘಾಟಿಸಲಾಯಿತು. ಗಂಗಾಮತಸ್ಥರು ಬೈಕ್ ರ‍್ಯಾಲಿ ಮೂಲಕ ಸಾಗಿ ತಹಸೀಲ್ದಾರ್ ಸಭಾಂಗಣದಲ್ಲಿ ಸಮಾವೇಶಗೊಂಡರು.