)
ಮಂಗಳೂರು: ಗಣೇಶ ಚತುರ್ಥಿ ಹಬ್ಬದ ವಾರಾಂತ್ಯದಲ್ಲಿ ಬೆಂಗಳೂರಿನಿಂದ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಪುತ್ತೂರು, ಬಂಟ್ವಾಳ ಸೇರಿದಂತೆ ವಿವಿಧೆಡೆಗೆ ಭಾರಿ ಪ್ರಮಾಣದಲ್ಲಿ ಪ್ರಯಾಣಿಕರು ಆಗಮಿಸುವ ನಿರೀಕ್ಷೆಯಿದ್ದು, ಹೆಚ್ಚುವರಿ ರೈಲು ಸಂಚಾರ ಕಲ್ಪಿಸುವಂತೆ ರೈಲ್ವೆ ಇಲಾಖೆಗೆ ರೈಲ್ವೆ ಸಂಘಟನೆಗಳು ಮನವಿ ಮಾಡಿವೆ.ಬೆಂಗಳೂರಿನಲ್ಲಿ ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ನೆಲೆಸಿರುವ ಕರಾವಳಿ ಭಾಗದ ಸಾವಿರಾರು ಮಂದಿ ಹಬ್ಬ, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ತಮ್ಮ ಊರುಗಳಿಗೆ ಮರಳುತ್ತಾರೆ. ಈ ಸಂದರ್ಭದಲ್ಲಿ ಬೆಂಗಳೂರು–ಹಾಸನ–ಸಕಲೇಶಪುರ–ಶಿರಾಡಿ–ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ರಸ್ತೆ ಪ್ರಯಾಣವೂ ಸಂಕಷ್ಟಕ್ಕೆ ಸಿಲುಕುತ್ತದೆ.ಸೆಪ್ಟೆಂಬರ್ 11ರ ಶುಕ್ರವಾರದ ರೈಲು ಟಿಕೆಟ್ ಕಾಯ್ದಿರಿಸುವಿಕೆಯ ಸ್ಥಿತಿಯೂ ಪ್ರಯಾಣಿಕರ ಬೇಡಿಕೆಯ ತೀವ್ರತೆಯನ್ನು ತೋರಿಸುತ್ತಿದೆ. ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು–ಕೋಝಿಕ್ಕೋಡ್ ಎಕ್ಸ್‌ಪ್ರೆಸ್ನಲ್ಲಿ ಸ್ಲೀಪರ್ ವರ್ಗದಲ್ಲಿ 180, 3ಎಯಲ್ಲಿ 115 ಹಾಗೂ 2ಎಯಲ್ಲಿ 47ರಷ್ಟು ಕಾಯುವಿಕೆ ಪಟ್ಟಿಯಿದೆ.ಅದೇ ರೀತಿ 16585 ಎಸ್‌ಎಂವಿಟಿ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ನಲ್ಲಿ ಸ್ಲೀಪರ್ ವರ್ಗದಲ್ಲಿ ರಿಗ್ರೆಟ್ ಸ್ಥಿತಿ ಎದುರಾಗಿದ್ದು, 3ಎಯಲ್ಲಿ 94 ಹಾಗೂ 2ಎಯಲ್ಲಿ 48ರಷ್ಟು ಕಾಯುವಿಕೆ ಪಟ್ಟಿಯಿದೆ.
ಗಣೇಶ ಚತುರ್ಥಿ ವಾರಾಂತ್ಯದ ದಟ್ಟಣೆ ತೀವ್ರಗೊಳ್ಳುವ ಮುನ್ನವೇ ರೈಲ್ವೆ ಇಲಾಖೆ ತ್ವರಿತ ನಿರ್ಧಾರ ಕೈಗೊಂಡು ಹೆಚ್ಚುವರಿ ರೈಲು ಸಾಮರ್ಥ್ಯ ಒದಗಿಸಬೇಕು ಎಂಬುದು ರೈಲ್ವೆ ಸಂಘಟನೆಗಳ, ಪ್ರಯಾಣಿಕರ ಆಗ್ರಹವಾಗಿದೆ.