- ವಿವಿಧೆಡೆ 1 ಅಡಿಯಿಂದ 12, 15 ಅಡಿಗಳ ಎತ್ತರಲ್ಲಿ ವಿವಿಧ ವಿನ್ಯಾಸ, ಭಂಗಿ, ರೂಪಗಳಲ್ಲಿ ವಿನಾಯಕ ದರ್ಶನ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಜಿಲ್ಲಾದ್ಯಂತ ಎಲ್ಲೆಡೆ ಗಣೇಶೋತ್ಸವ ಸಂಭ್ರಮ, ಸಡಗರದಿಂದ ಭಾನುವಾರ ಕೂಡ ಮುಂದುವರಿದು, ಹಬ್ಬದ ವಾತಾವರಣ ಮನೆಮಾಡಿದೆ. ವಿವಿಧ ರೀತಿಯ ಸುಮಾರು 1 ಅಡಿಯಿಂದ 12, 15 ಅಡಿ ಎತ್ತರದ ವಿವಿಧ ವಿನ್ಯಾಸ, ಭಂಗಿ, ರೂಪಗಳಲ್ಲಿ ಒಡಮೂಡಿರುವ ವಿಘ್ನ ನಿವಾರಕನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಗಣೇಶ ಚತುರ್ಥಿಯ ಶನಿವಾರ ಆಗಮಿಸಿದ್ದ ಗಣಪತಿಯನ್ನು ಕೆಲವರು ಮನೆಯ ಪದ್ಧತಿಯಂತೆ ಸಂಜೆಯೇ ಬೀಳ್ಕೊಟ್ಟು ಭಕ್ತಿ ಅರ್ಪಿಸಿದರು. ಅಲ್ಲಲ್ಲಿ ಪಾಲಿಕೆಯಿಂದ ಗಣೇಶನ ವಿಸರ್ಜನೆಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಶನಿವಾರ ಸಂಜೆಯಿಂದಲೇ ಗಣೇಶ ವಿಸರ್ಜನೆ ಕಾರ್ಯ ಮಳೆ ನಡುವೆಯೂ ಸಾಗಿತ್ತು. 3, 5, 9, 11, 21 ದಿನ ಹೀಗೆ ಸಾಮರ್ಥ್ಯಾನುಸಾರ ಗಣೇಶ ಪ್ರತಿಷ್ಠಾಪಿಸಿ, ವಿಸರ್ಜಿಸುವ ನಿಟ್ಟಿನಲ್ಲಿ ಆಚರಣೆ ಸಾಗಿದೆ. ಸಾಕಷ್ಟು ಕಡೆ ಗಣೇಶ ಪೆಂಡಾಲ್‌ಗಳಲ್ಲಿ ಕೇಸರಿ ಬ್ಯಾನರ್, ಬಂಟಿಂಗ್ಸ್, ಬಾವುಟ ರಾರಾಜಿಸುತ್ತಿವೆ.ಶಂಖದೊಳಗೆ ಕುಳಿತಿರುವ, ರಥದಲ್ಲಿ ಹೋಗುತ್ತಿರುವ, ಹುತ್ತದಿಂದ ಒಡಮೂಡುತ್ತಿರುವ ಗಣಪತಿ ವಿಗ್ರಹಗಳು ಜನರ ಮನ ಸೆಳೆಯುತ್ತಿವೆ. ಶಿವ, ವಿಷ್ಣು, ಕೃಷ್ಣ, ರಾಮ ಹೀಗೆ ನಾನಾ ರೂಪಗಳಲ್ಲಿ ಗಣೇಶ ಮೂರ್ತಿಗಳು ಮೂಡಿಬಂದಿರುವುದು ಕಲಾವಿದರ ಕೈ ಚಳಕಕ್ಕೆ ಸಾಕ್ಷಿಯಾಗಿದೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಈ ಬಾರಿ ಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗಿದೆ. ಕೋಲ್ಕತ್ತ ಮೂಲದ 25ಕ್ಕೂ ಅಧಿಕ ಕಲಾವಿದರು ತಿಂಗಳಿನಿಂದ 200*100 ಅಡಿ ವಿಶಾಲವಾದ ಭವ್ಯ ಮಂಟಪ ನಿರ್ಮಿಸಿದ್ದಾರೆ. ದೇಶದಲ್ಲಿರುವ ಶಿವನ 12 ಜ್ಯೋತಿರ್ಲಿಂಗಗಳ ಪೈಕಿ ಕಾಶಿ ವಿಶ್ವನಾಥ ದೇವಾಲಯದಲ್ಲಿರುವ ಲಿಂಗವೂ ಒಂದಾಗಿದ್ದು, ಅದನ್ನೇ ಹೋಲುವ ಜ್ಯೋತಿರ್ಲಿಂಗವನ್ನು ಮಂಟಪದೊಳಗೆ ಪ್ರತಿಷ್ಠಾಪಿಸಲಾಗಿದೆ. 3 ಗೋಪುರಗಳುಳ್ಳ ಮಂಟಪಕ್ಕೆ 4 ಕಡೆಯಿಂದ ಪ್ರವೇಶ ಹಾಗೂ ಒಂದು ಕಡೆ ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ.ಜಿಲ್ಲಾ ವರದಿಗಾರರ ಕೂಟದಲ್ಲಿ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ತೋಗಟವೀರ ಸಮುದಾಯ ಭವನದಲ್ಲಿ ಹೊಸ ಮಾದರಿಯ ವಕ್ರತುಂಡ, ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘದಿಂದ ಲೇಜರ್ ಶೋ ಮೂಲಕ ಗಣಪತಿ ದರ್ಶನ, ರಾಂ ಅಂಡ್ ಕೋ ಸರ್ಕಲ್, ಎಂಸಿಸಿ ಎ, ಬಿ ಬ್ಲಾಕ್, ಎಸ್.ನಿಜಲಿಂಗಪ್ಪ ಬಡಾವಣೆ, ವಿನೋಬನಗರ, ಪಿ.ಜೆ.ಬಡಾವಣೆ ಸೇರಿದಂತೆ ಅನೇಕ ಸಂಘ ಸಂಸ್ಥೆಯವರು ಬಗೆಬಗೆಯ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ದೊಡ್ಡಪೇಟೆ ಗಣಪತಿ ದೇವಸ್ಥಾನದಲ್ಲಿ 200 ಕೆಜಿಗೂ ಅಧಿಕ ಕೊಬ್ಬರಿ ಗಿಟುಗುಗಳಿಂದ ವಿಶೇಷವಾಗಿ ಗಣೇಶನನ್ನು ಅಲಂಕಾರ ಮಾಡಲಾಗಿದೆ. ಮಹಾರಾಜ ಪೇಟೆಯಲ್ಲಿರುವ ವಿಠ್ಠಲ ಮಂದಿರದಲ್ಲಿ ಸಂತ ತುಕಾರಾಮ- ಛತ್ರಪತಿ ಶಿವಾಜಿ ಮಹಾರಾಜರ ಮಾದರಿಯಾಗಿಸಿಕೊಂಡು ಗಣಪತಿ ಪ್ರತಿಷ್ಠಾಪಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹಿಂದೂ-ಕ್ರೈಸ್ತ- ಮುಸಲ್ಮಾನ ಸೇರಿದಂತೆ ಎಲ್ಲ ಸಮಾಜದವರು ಸೇರಿ ಭಾವೈಕ್ಯತೆ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಬಹುತೇಕ ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.- - - -ಫೋಟೋಗಳು:
(ಗಣಪತಿ ಫೋಟೋಗಳ ಬಳಸಬಹುದು)