ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಮುಖ್ಯ ರಸ್ತೆಯ ಪೇಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಕಾಂಪೌಂಡ್ ಬಾಯ್ಸ್ ಯುವಕರ ತಂಡ ಹಾಗೂ ಚಿಕ್ಕ ಮಸೀದಿ ಹಿಂಭಾಗದ ಶ್ರೀವಿನಾಯಕ ಗೆಳೆಯರ ಬಳಗದಿಂದ ಪ್ರತ್ಯೇಕವಾಗಿ ಎರಡು ಕಡೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಸ್ಥಾಪಿಸಲಾಗಿತ್ತು.
ಶನಿವಾರ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಯುವಕರು ಹತ್ತಾರು ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು. ಕಳೆದ ವರ್ಷ ನಾಗಮಂಗಲ ಹಾಗೂ ಇತ್ತೀಚೆಗೆ ಮದ್ದೂರಿನಲ್ಲಿ ಗಣೇಶನ ವಿಸರ್ಜನೆ ವೇಳೆ ನಡೆದ ಸಂಘರ್ಷಗಳು ಪಟ್ಟಣದಲ್ಲಿ ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಬಾರಿ ಬಿಗಿ ಭದ್ರತೆ ಕೈಗೊಂಡು ನೂರಾರು ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.1 ಎಸ್‌ಪಿ, 2 ಎಎಸ್‌ಪಿ, 3 ಡಿವೈಎಸ್‌ಪಿ, 8 ಇನ್ಸ್ ಪೆಕ್ಟರ್, 9 ಪಿಎಸ್‌ಐ, ಅರ್‌ಪಿಎಫ್ ತುಕಡಿ ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಗ್ಗಿನಿಂದಲೇ ಪಟ್ಟಣದ ಜಾಮಿಯಾ ಮಸೀದಿ ಸುತ್ತಲೂ ಪೊಲೀಸ್ ಬ್ಯಾರಿಗೇಟ್ ಅಳವಡಿಸಿ ಪೊಲೀಸರು ಬಂದೋಬಸ್ತ್ ಹಾಕಲಾಗಿತ್ತು. ಜೊತೆಗೆ ಪಟ್ಟಣದ ಪ್ರತಿ ದೇವಾಲಯಗಳಲ್ಲಿ ಸಹ 2 -3 ಮಂದಿ ಪೊಲೀಸರನ್ನು ನಿಯೋಜಿಸಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ಗಲಾಟೆ, ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿತ್ತು.
ಗಣಪತಿಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಭದ್ರಕಾಳಿಗೆ ಭಕ್ತರಿಂದ ಈಡುಗಾಯಿ ಸಮರ್ಪಣೆ
ಚನ್ನನಕೊಪ್ಪಲು ಬಡಾವಣೆಯ ಪ್ರಿನ್ಸ್‌ಬಾಯ್ಸ್ ಬಳಗ ಹಮ್ಮಿಕೊಂಡಿದ್ದ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಶ್ರೀಭದ್ರಕಾಳಿ ದೇವಿ ಮೆರವಣಿಗೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಈಡುಗಾಯಿ ಸಮರ್ಪಿಸಿದರು.
ಭಕ್ತರು ಎಸೆಯುತ್ತಿದ್ದ ನಿಂಬೆಹಣ್ಣು, ತೆಂಗಿನಕಾಯಿಯನ್ನು ವೀರವೇಷದಿಂದ ಖಡ್ಗದಿಂದ ಛೇದಿಸಿ ನಿಬ್ಬೆರಗು ಗೊಳಿಸಿದರು. ಮಂಡಲದ ಸುತ್ತ ವೃತ್ತಾಕಾರವಾಗಿ ತಿರುಗುತ್ತ ಬೆಂಕಿ ಜ್ವಾಲೆಯೊಂದಿಗೆ ನರ್ತಿಸಿದರು. ಹಾಸನ ಕಲಾತಂಡ ಬಳಗದ ಭದ್ರಕಾಳಿ ನೃತ್ಯ ಮೆರವಣಿಗೆ ವೀಕ್ಷಿಸಲು ಹತ್ತಾರು ಗ್ರಾಮಗಳಿಂದ ರೈತರು, ಯುವಕರು ಅಧಿಕವಾಗಿ ಆಗಮಿಸಿದ್ದರು.
ಅಂತಿಮವಾಗಿ ಅಮಾನಿಕೆರೆಯಲ್ಲಿ ಗಣೇಶಮೂರ್ತಿಯನ್ನು ವಿಷರ್ಜಿಸಲಾಯಿತು. ಭಕ್ತರಿಗೆತೀರ್ಥ, ಪ್ರಸಾದ ವಿತರಿಸಲಾಯಿತು.