ಗಣೇಶ್‌ಗೆ ಸಚಿವ ಸ್ಥಾನ ನೀಡಬೇಕು; ಕಡೆಗಣಿಸಿದರೆ ಹೋರಾಟ

KannadaprabhaNewsNetwork |  
Published : Jun 01, 2026, 02:15 AM IST
ಕಂಪ್ಲಿಯ ಅತಿಥಿಗೃಹ ಆವರಣದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಸಂಘಟನಾ ಸಭೆಯಲ್ಲಿ ನೀರಗಂಟೆ ವೀರೇಶ್ ಮಾತನಾಡಿದರು. | Kannada Prabha

ಸಾರಾಂಶ

ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು

ಕಂಪ್ಲಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ನೀರಗಂಟೆ ವೀರೇಶ್ ಒತ್ತಾಯಿಸಿದರು.

ಪಟ್ಟಣದ ಅತಿಥಿಗೃಹ ಆವರಣದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆಯಬೇಕು. ಜಿಲ್ಲೆಯ ಐದು ಶಾಸಕರ ಪೈಕಿ ನಾಲ್ವರು ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿರುವುದು ವಿಶೇಷ. ಅಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ತತ್ವದ ಆಧಾರದ ಮೇಲೆ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಎಂದು ಹೇಳಿದರು.

ಶಾಸಕ ಗಣೇಶ್ ಎರಡು ಬಾರಿ ನಿರಂತರವಾಗಿ ಜನರ ಆಶೀರ್ವಾದದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವುದರ ಜೊತೆಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಅವರ ಅನುಭವ, ಕಾರ್ಯಕ್ಷಮತೆ ಹಾಗೂ ಜನಪರ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಜಾತಿವಾರು ಸಮೀಕರಣ, ಜಿಲ್ಲಾ ಪ್ರಾತಿನಿಧ್ಯ ಹಾಗೂ ಸಾಮಾಜಿಕ ಸಮತೋಲನದ ದೃಷ್ಟಿಯಿಂದಲೂ ಗಣೇಶ್ ಅವರಿಗೆ ಸಚಿವ ಸ್ಥಾನ ನೀಡಲು ಎಲ್ಲ ರೀತಿಯ ಅರ್ಹತೆಗಳಿವೆ. ವಾಲ್ಮೀಕಿ ಸಮುದಾಯದ ಆಶಯವನ್ನು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಗೌರವಿಸಬೇಕು. ಸಚಿವ ಸ್ಥಾನ ಹಂಚಿಕೆಯಲ್ಲಿ ಅವರನ್ನು ಕಡೆಗಣಿಸಿದರೆ ಸಮುದಾಯದ ವತಿಯಿಂದ ಹೋರಾಟ ರೂಪಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಶಾಸಕ ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ), ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಪತ್ರ ಬರೆದು ವಾಲ್ಮೀಕಿ ಸಮುದಾಯದ ಅಭಿಪ್ರಾಯವನ್ನು ತಿಳಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಯಲ್ಲಿ ವಾಲ್ಮೀಕಿ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ಸಮುದಾಯದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದು, ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಪಕ್ಷದ ನಾಯಕತ್ವ ಮಾಡಬೇಕು. ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಸಮುದಾಯದ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಮಹಾಸಭಾದ ಪದಾಧಿಕಾರಿಗಳಾದ ಬಿ. ಅಂಬಣ್ಣ, ಬಿ. ನಾರಾಯಣಪ್ಪ, ಎ. ಹುಲುಗಪ್ಪ, ವಾಲ್ಮೀಕಿ ಈರಣ್ಣ, ರಘುನಾಯಕ, ಬಿ. ವೆಂಕಟೇಶ, ಬಿ. ಶೇಖರ್, ರಮೇಶ್ ದೇವಲಾಪುರ, ದೇವಸಮುದ್ರ ವೆಂಕೋಬಾ ನಾಯಕ, ಮೆಟ್ರಿ ಲೋಕೇಶ್, ಎಸ್.ಆರ್.ಪುರದ ನಾಗಭೂಷಣ, ಸಣಾಪುರದ ಸುಧಾಕರ, ಉಪ್ಪಾರಹಳ್ಳಿಯ ಪರಶುರಾಮ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಪರವಾಗಿ ಹಂಪಿಯಲ್ಲಿ ಕಾಂಗ್ರೆಸ್‌ನಿಂದ ಪೂಜೆ
ವಿಜಯನಗರ ಜಿಲ್ಲೆಯಲ್ಲಿ ಇಂದಿನಿಂದ 1612 ಶಾಲೆ ಆರಂಭ