ಗಣೇಶ ಚತುರ್ಥಿ ಹಬ್ಬಕ್ಕೆ ಮಾರುಕಟ್ಟೆಗಳಲ್ಲಿ ಖರೀದಿ ಅಬ್ಬರ : ದರ ಏರಿಕೆ ನಡುವೆಯೂ ಕಳೆ

KannadaprabhaNewsNetwork | Updated : Sep 06 2024, 04:58 AM IST

ಗಣೇಶ ಚತುರ್ಥಿ ಹಬ್ಬಕ್ಕೆ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿತ್ತು. ಹೂ, ತರಕಾರಿ ಬೆಲೆ ಕೊಂಚ ಏರಿತ್ತು.

 ಬೆಂಗಳೂರು : ಗಣೇಶ ಚತುರ್ಥಿಗೆ ಸಿಲಿಕಾನ್‌ ಸಿಟಿ ಸಜ್ಜಾಗಿದ್ದು, ದರ ಏರಿಕೆ ನಡುವೆಯೂ ಮಾರುಕಟ್ಟೆ ಕಳೆಗಟ್ಟಿದೆ. ಗ್ರಾಹಕರು ಮುಗಿಬಿದ್ದು ಹಬ್ಬಕ್ಕೆ ಪೂಜಾ ಸಾಮಗ್ರಿ, ಹೂವು ಹಣ್ಣು, ದಿನಸಿ, ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

ಗೌರಿ ಗಣೇಶ ಹಬ್ಬಕ್ಕೆ ಒಂದೆರಡು ದಿನ ಬಾಕಿ ಇರುವಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿದೆ. ಸದ್ಯ ಹೂವಿನ ದರ ತುಸು ಇಳಿದಿದ್ದರೂ ನಾಳೆ ಮತ್ತು ನಾಡಿದ್ದು ಹೆಚ್ಚುವ ಸಾಧ್ಯತೆಯಿದೆ. ಹಣ್ಣು ಹಾಗೂ ಕೆಲವು ತರಕಾರಿಗಳ ಬೆಲೆ ಈಗಾಗಲೇ ಹೆಚ್ಚಾಗಿದೆ.

ಕೆ.ಆರ್‌.ಮಾರುಕಟ್ಟೆ ಸೇರಿದಂತೆ ಮಲ್ಲೇಶ್ವರ, ಗಾಂಧಿಬಜಾರ್‌, ಜಯನಗರ, ಯಶವಂತಪುರ, ಜೆ.ಪಿ.ನಗರ, ಕೆ.ಆರ್‌.ಪುರ, ವೈಟ್‌ಫೀಲ್ಡ್‌ಗಳಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಸಗಟು ಮಾರುಕಟ್ಟೆಗಳಿಗೆ ಎಂದಿಗಿಂತ ಹೆಚ್ಚಾಗಿ ಹೂವು, ಹಣ್ಣು ಬರುತ್ತಿದೆ. ಹಳ್ಳಿಗಳಿಂದ ಬಂದ ರೈತರು, ವರ್ತಕರು ವ್ಯಾಪಾರದಲ್ಲಿ ತೊಡಗಿದ್ದಾರೆ. ಸಹಜವಾಗಿ ಕೆ.ಆರ್.ಮಾರುಕಟ್ಟೆ, ಅವೆನ್ಯೂ ರಸ್ತೆ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿದೆ.

ಟೊಮೆಟೋ ಬೆಲೆ ಇಳಿದಿದ್ದರೆ, ಈರುಳ್ಳಿ, ಬೆಳ್ಳುಳ್ಳಿ ದರ ಏರಿಕೆಯಾಗುತ್ತಲೇ ಇದೆ. ಹಸಿಮೆಣಸು, ಬೀನ್ಸ್‌ ಬೆಲೆ ಹೆಚ್ಚಾಗಿದೆ. ಹಬ್ಬಕ್ಕಾಗಿ ನೆರೆಯ ಜಿಲ್ಲೆ ಸೇರಿ ತಮಿಳುನಾಡು, ಮಹಾರಾಷ್ಟ್ರದಿಂದ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ತರಕಾರಿ ಬೆಲೆ ತೀರಾ ದುಬಾರಿ ಆಗುವುದು ತಪ್ಪಿದೆ ಎಂದು ಕಲಾಸಿಪಾಳ್ಯದ ವರ್ತಕ ಮಣಿ ತಿಳಿಸಿದರು. ವಿಶೇಷವಾಗಿ ಕೊತ್ತಂಬರಿ ಮಳೆಯಿಂದ ಹಾನಿಗೀಡಾದ ಹಿನ್ನೆಲೆಯಲ್ಲಿ ಕಟ್ಟಿಗೆ ₹60ವರೆಗೂ ಮಾರಾಟ ಆಗುತ್ತಿದೆ.

ಹೂವುಗಳ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ₹100 - ₹200 ವರೆಗೆ ಏರಿಕೆಯಾಗಿದೆ. ಆದರೆ ಕನಕಾಂಬರದ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಕಳೆದ ವಾರ ₹800- ₹1000 ಬೆಲೆಯಿದ್ದ ಕನಕಾಂಬರ ಪ್ರಸ್ತುತ ಕೇಜಿಗೆ ₹3000 ತಲುಪಿದೆ. ವರಮಹಾಲಕ್ಷ್ಮಿ ಹಬ್ಬದ ವೇಳೆ ಇದು ₹4000 ದರದಲ್ಲಿತ್ತು. ಹಬ್ಬದ ದಿನ ಹೆಚ್ಚುಕಡಿಮೆ ಇದೇ ದರಕ್ಕೆ ವ್ಯಾಪಾರವಾಗಲಿದೆ. ಉಳಿದಂತೆ ಸುಗಂಧರಾಜ, ಮಲ್ಲಿಗೆ, ಗುಲಾಬಿ, ಸಂಪಿಗೆ ಹೂವುಗಳು ಸದ್ಯ ಕಡಿಮೆ ಇದ್ದರೂ ಮುಂದಿನ ಮೂರು ದಿನ ಏರಿಕೆಯಾಗಲಿದೆ ಎಂದು ಕೆ.ಆರ್.ಮಾರುಕಟ್ಟೆ ಹೂವಿನ ವರ್ತಕರು ತಿಳಿಸಿದರು.

ಇನ್ನು, ಹಣ್ಣಿನ ವ್ಯಾಪಾರವೂ ಚಿಗಿತುಕೊಂಡಿದೆ. ಈ ವಾರದ ಆರಂಭದಿಂದಲೇ ಬಹುತೇಕ ಎಲ್ಲ ಹಣ್ಣುಗಳ ಬೆಲೆ ₹20- ₹50 ದರ ಹೆಚ್ಚಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಸೇಬು, ಮೂಸಂಬಿ, ಕಿತ್ತಳೆ, ದ್ರಾಕ್ಷಿ, ಬಾಳೆಹಣ್ಣಿನ ಬೆಲೆಯಲ್ಲೂ ಏರಿಕೆಯಾಗಿದೆ. ಅಲ್ಲದೆ, ಖರ್ಜುರ, ಒಣದ್ರಾಕ್ಷಿ ಬೆಲೆಯೂ ಹೆಚ್ಚಾಗಿದೆ ಎಂದು ವರ್ತಕ ಇದ್ರಿಸ್‌ ತಿಳಿಸಿದರು.

ಅಲಂಕಾರಿಕವಾಗಿ ಬಳಸುವ ಪ್ಲಾಸ್ಟಿಕ್‌ ಹೂವು, ಹಣ್ಣು ಮುಂತಾದ ವಸ್ತುಗಳಿಗೂ ಹೆಚ್ಚಿನ ಬೇಡಿಕೆಯಿದೆ.ದಿಡೀರ್‌ ಮಾರುಕಟ್ಟೆಗಳು!

ಇನ್ನು ಹಬ್ಬಕ್ಕಾಗಿ ನಗರದಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆಗಳು ತಲೆ ಎತ್ತಿವೆ. ನಗರದ ಶೇಷಾದ್ರಿಪುರ, ಮಲ್ಲೇಶ್ವರ, ಜಯನಗರ, ಎನ್‌.ಆರ್‌.ಕಾಲೋನಿ ಸೇರಿದಂತೆ ಪಾದಚಾರಿ ಮಾರ್ಗ, ರಸ್ತೆಯ ಇಕ್ಕೆಲಗಳಲ್ಲಿ ಬೆಂಗಳೂರು ಗ್ರಾಮಾಂತರ ಸೇರಿ ವಿವಿಧೆಡೆಯಿಂದ ಬಂದ ವರ್ತಕರು ಬಾಳೆ ಕಂದು, ಮಾವಿನೆಲೆ, ಗರಿಕೆ, ಎಕ್ಕದ ಹೂವು, ಬೇಲದ ಹಣ್ಣು, ಹೂವು ಸೇರಿ, ಕುಂಬಳಕಾಯಿ ಸೇರಿ ಪೂಜೆಗೆ ಬೇಕಾದ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ. ಹೂವುಗಳ ದರ  (ಕೇಜಿ)ಕನಕಾಂಬರ ₹3000 ಮಲ್ಲಿಗೆ ₹600 ಗುಲಾಬಿ ₹250 ಸೇವಂತಿಗೆ ₹180 ಸುಗಂಧರಾಜ ₹240

ಹಣ್ಣುಗಳ ಬೆಲೆ (ಕೇಜಿ)ಬಾಳೆಹಣ್ಣು ₹120 ಸೇಬು ₹250ದಾಳಿಂಬೆ ₹160ದ್ರಾಕ್ಷಿ₹200ಸಪೋಟಾ ₹100ಅನಾನಸ್‌ ₹80ಕ್ಕೆ 2ಸೀತಾಫಲ ₹100

ಪೂಜಾ ಸಾಮಗ್ರಿ ಬೆಲೆ 

ಬಾಳೆಕಂದು ₹40- ₹150ಮಾವಿನೆಲೆ ₹20ನೂರು ವೀಳ್ಯದೆಲೆ ₹100ಗರಿಕೆ₹30 ಬಿಲ್ವಪತ್ರೆ ₹20

ತರಕಾರಿಬೆಲೆಕ್ಯಾರೆಟ್‌ ₹60 ಈರುಳ್ಳಿ₹60 ಆಲೂಗಡ್ಡೆ₹30 ಟೊಮೆಟೋ₹20 ಮೆಣಸಿನಕಾಯಿ₹80 ಬೀಟ್ರೂಟ್‌₹40 ಬೂದುಗುಂಬಳ - ₹ 50ಬೀನ್ಸ್‌ ₹80