ನಿಷೇಧ ನಿರ್ಲಕ್ಷಿಸಿ ಕೆರೆಯಲ್ಲಿ ಗಣೇಶಮೂರ್ತಿ ವಿಸರ್ಜನೆ

KannadaprabhaNewsNetwork |  
Published : Sep 22, 2026, 01:15 AM IST
21ಕೆಆರ್ ಎಂಎನ್ 4,5,6.ಜೆಪಿಜಿರಂಗರಾಯರದೊಡ್ಡಿ ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಿರುವುದು | Kannada Prabha

ಸಾರಾಂಶ

ರಾಮನಗರ: ನಿಷೇಧದ ನಡುವೆಯೂ ರಾಮನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುತ್ತಿರುವುದು ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗಿದೆ

ರಾಮನಗರ: ನಿಷೇಧದ ನಡುವೆಯೂ ರಾಮನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುತ್ತಿರುವುದು ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ನೈಸರ್ಗಿಕ ಕೆರೆಗಳಲ್ಲಿ ಪ್ಲಾಸ್ಟರ್ ಆಫ್ ಪ್ಲಾರಿಸ್ (ಪಿಒಪಿ) ಮತ್ತು ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ನೈಸರ್ಗಿಕ ಕೆರೆಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ನಿಯಮಗಳನ್ನು ಮೀರಿ ರಂಗರಾಯರದೊಡ್ಡಿ ಕೆರೆಲ್ಲಿ ಮೂರ್ತಿಗಳನ್ನು ಬಿಡಲಾಗುತ್ತಿದೆ.

ಜಿಲ್ಲಾ ಕೇಂದ್ರ ರಾಮನಗರ ಟೌನಿನಲ್ಲಿ ಪ್ರತಿಷ್ಠಾಪಿರುವ ಗಣೇಶ ಮೂರ್ತಿಗಳ ವಿಸರ್ಜನೆಗಾಗಿಯೇ ರಂಗರಾಯರದೊಡ್ಡಿ ಕೆರೆ ಬಳಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ 20 ಅಡಿ ಆಳ ಇರುವ ಸುಸಜ್ಜಿತ ಸಿರಿಗೌರಿ ಕಲ್ಯಾಣಿ ನಿರ್ಮಿಸಲಾಗಿದೆ. ಈ ಸ್ಥಳ ಬಿಟ್ಟು ಬೇರೆಲ್ಲೂ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇಲ್ಲ. ಆದರೆ, ಸಿರಿಗೌರಿ ಕಲ್ಯಾಣಿ ಗಣೇಶ ಮೂರ್ತಿಗಳಿಂದ ಭರ್ತಿಯಾಗಿರುವ ನೆಪವೊಡ್ಡಿ ಭಾನುವಾರ ಗಣೇಶ ಮೂರ್ತಿಗಳನ್ನು ಕ್ರೇನ್ ಸಹಾಯದಿಂದ ರಂಗರಾಯರದೊಡ್ಡಿ ಕೆರೆಯಲ್ಲಿ ವಿಸರ್ಜಿಸಲಾಗಿದೆ. ಇದು ಪರಿಸರ ನಿಯಮಗಳ ಉಲ್ಲಂಘನೆ ಎಂಬುದು ತಿಳಿದಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.

ಒಂದೆಡೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸ್ವಚ್ಛ ನಗರ ಮತ್ತು ಪರಿಸರ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದರೆ, ಮತ್ತೊಂದೆಡೆ ಅದೇ ನಗರಸಭೆ ಅಧಿಕಾರಿಗಳು ಗಣೇಶಮೂರ್ತಿಗಳ ವಿಸರ್ಜನೆ ವಿಚಾರದಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಈ ಸಿರಿಗೌರಿ ಕಲ್ಯಾಣಿಯನ್ನು ಸ್ಥಳೀಯ ಧಾರ್ಮಿಕ ವಿಧಿವಿಧಾನಗಳಿಗೆ ಹಾಗೂ ಪ್ರಮುಖವಾಗಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಬಳಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರಾಮನಗರ ನಗರಸಭೆ ಈ ಕಲ್ಯಾಣಿಯ ಸೌಂದರ್ಯೀಕರಣ ಮತ್ತು ಅಭಿವೃದ್ಧಿಗಾಗಿ ಲಕ್ಷಾಂತರ ರು. ಖರ್ಚು ಮಾಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಿರಿಗೌರಿ ಕಲ್ಯಾಣಿ ಉದ್ದೇಶಿತ ಕಾರ್ಯಕ್ಕೆ ಸದ್ಬಳಕೆಯಾಗುತ್ತಿಲ್ಲ.

ಕಲ್ಯಾಣಿಯಲ್ಲಿ ಸಾರ್ವಜನಿಕರಿಗೆ ಗಣಪತಿ ವಿಸರ್ಜನೆ ವೇಳೆ ನೀರಿಗಿಳಿಯುವುದನ್ನು ನಿಷೇಧಿಸಲಾಗಿದೆ. ನಗರಸಭೆಯ ನುರಿತ ಸಿಬ್ಬಂದಿ ಮಾತ್ರ ವಿರ್ಸಜನೆ ಮಾಡುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಕಲ್ಯಾಣಿ ಸುತ್ತಲು ತಂತಿ ಬೇಲಿ ಅಳವಡಿಸಲಾಗಿದೆ. ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಾವಕಾಶ ಮಾಡಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ರಂಗರಾಯರದೊಡ್ಡಿ ಕೆರೆವರೆಗೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ಇಷ್ಟಾದರು ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಸಿರಿಗೌರಿ ಕಲ್ಯಾಣಿ ಬದಲಿಗೆ ರಂಗರಾಯರದೊಡ್ಡಿ ಕೆರೆಯಲ್ಲಿ ವಿಸರ್ಜಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಜಲಮೂಲ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಕಾರ್ಯನ್ಮುಖರಾಗಬೇಕಿದೆ.

ಕೋಟ್ ................

ಸಿರಿಗೌರಿ ಕಲ್ಯಾಣಿ ಬದಲಿಗೆ ರಂಗರಾಯರದೊಡ್ಡಿ ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತಿದೆ. ಈ ಕೆರೆಯ ನೀರನ್ನು ರಂಗರಾಯರದೊಡ್ಡಿ, ಅರ್ಚಕರಹಳ್ಳಿ, ನಾಗನಕಟ್ಟೆ ಹಾಗೂ ಹನುಮಂತನಗರ ಭಾಗದ ದನಕರುಗಳು ಅವಲಂಬಿಸವೆ. ಮೂರ್ತಿಗಳ ರಾಸಾಯನಿಕ ಮಿಶ್ರಿತ ನೀರು ಸೇವಿಸಿ ಜಾನುವಾರುಳು ಕಾಯಿಲೆ ಬೀಳುವ ಆತಂಕ ಎದುರಾಗಿದೆ. ಇದಕ್ಕೆ ನಗರಸಭೆ ಆರೋಗ್ಯ ಮತ್ತು ಪರಿಸರ ಶಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.

- ಬೈರೇಗೌಡ, ಸದಸ್ಯರು, ನಗರಸಭೆ, ರಾಮನಗರ

ಬಾಕ್ಸ್ ................

ಕಲ್ಯಾಣಿ ಸ್ವಚ್ಛತೆಗೆ ತಿಂಗಳು ಬೇಕು

ಪ್ರತಿನಿತ್ಯ 5ರಿಂದ 7 ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳುತ್ತಿವೆ. ಶನಿವಾರ ಮತ್ತು ಭಾನುವಾರ ಈ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಗಣೇಶನ ಮೂರ್ತಿ ಮಾಡಲು ಬಳಸಿರುವ ಮರ ಮತ್ತು ಕಬ್ಬಿಣದ ಸಾಮಗ್ರಿಗಳನ್ನು ಪ್ರತ್ಯೇಕಿಸಲಾಗುತ್ತಿದೆ. ಕಲ್ಯಾಣಿಯಲ್ಲಿ ಮೂರ್ತಿಗಳು ಕರಗಿದ ನಂತರ ತಳದಲ್ಲಿ ಉಳಿಯುವ ಮಣ್ಣು ಅಥವಾ ಹೂಳನ್ನು ಹೊರ ತೆಗೆಯಬೇಕಿದೆ. ಒಟ್ಟಾರೆ ಮೂರ್ತಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ, ಕಲ್ಯಾಣಿಯನ್ನೂ ಸ್ವಚ್ಛಗೊಳಿಸಲು ಒಂದು ತಿಂಗಳಾದರೂ ಬೇಕು ಎನ್ನುತ್ತಾರೆ ವಿಲೇವಾರಿ ಸಿಬ್ಬಂದಿ.

21ಕೆಆರ್ ಎಂಎನ್ 4,5,6.ಜೆಪಿಜಿ

ರಂಗರಾಯರದೊಡ್ಡಿ ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಿರುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿತರಣಾ ಕಾಲುವೆಗಳಿಗೆ ನೀರು ಪೂರೈಕೆ ಸ್ಥಗಿತ: ಜಿಲ್ಲಾಧಿಕಾರಿ ಆದೇಶಕ್ಕೆ ಖಂಡನೆ
ದೇಶದ ಅಭಿವೃದ್ಧಿಗೆ ಇಂಜಿನಿಯರರಿಂದ ಅಮೂಲ್ಯ ಕೊಡುಗೆ