ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ: ಗಣೇಶ ಚತುರ್ಥಿ ಹಬ್ಬ ಹತ್ತಿರವಾಗುತ್ತಿದ್ದಂತೆ, ನಗರದ ಬೀದಿಗಳಲ್ಲಿ ಬಣ್ಣ ಬಣ್ಣದ ಗಣೇಶ ಮೂರ್ತಿಗಳ ಮೇಳ ಆರಂಭವಾಗಿದೆ. ಆದರೆ, ಈ ಮೂರ್ತಿಗಳ ಹಿಂದೆ ದುಡಿಯುತ್ತಿರುವ ಕಲಾವಿದರ ಕಥೆ ಹೆಚ್ಚು ಜನರ ಗಮನಕ್ಕೆ ಬರುವುದಿಲ್ಲ. ಹಗಲಿರುಳು ಶ್ರಮಿಸುವ ಕಲಾವಿದರ ಕೈಗಳಲ್ಲಿ ಮಣ್ಣು ರೂಪ ಪಡೆದು ಆಪ್ತ ದೈವವಾದ ಗಣಪತಿಯಾಗಿ ಹೊರಹೊಮ್ಮುತ್ತದೆ.ಉತ್ತಮ ಗುಣಮಟ್ಟದ ಮಣ್ಣನ್ನು ತಂದು ಅದನ್ನು ನೆನೆಸಿ ಮೃದುವಾಗಿಸಲಾಗುತ್ತದೆ. ನಂತರ ಕೈಯಿಂದಲೇ ಅಥವಾ ಅಚ್ಚಿನಿಂದ ರೂಪ ಕೊಡಲಾಗುತ್ತದೆ. ಸಣ್ಣ ಮೂರ್ತಿಗಳಿಗೆ ಎರಡ್ಮೂರು ದಿನ ಸಾಕಾದರೂ ದೊಡ್ಡ ಮೂರ್ತಿಗಳಿಗೆ ಕನಿಷ್ಠ ಹತ್ತು ದಿನ ಬೇಕಾಗುತ್ತದೆ.
ಮಣ್ಣನ್ನು ಗಟ್ಟಿಯಾಗಿಸಲು ನಮಗೆ ಸೂಕ್ತವಾದ ಒಣಗುವಿಕೆ ಬೇಕು. ಮಳೆ ಬಂದರೆ ಕೆಲಸ ವಿಳಂಬವಾಗುತ್ತದೆ ಎನ್ನುತ್ತಾರೆ ಪಶ್ಚಿಮ ಬಂಗಾಳದ ಕಲಾವಿದ ಸುತಾರ.ಪರಿಸರಸ್ನೇಹಿ ಹಬ್ಬದತ್ತ ಹೆಜ್ಜೆ: ಇತ್ತೀಚಿನ ವರ್ಷಗಳಲ್ಲಿ ಪರಿಸರ ಸಂರಕ್ಷಣೆಗಾಗಿ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಮೂರ್ತಿಗಳು ನೀರಿನಲ್ಲಿ ಕರಗದೆ ಪರಿಸರಕ್ಕೆ ಹಾನಿ ಮಾಡುತ್ತವೆ. ಇದನ್ನು ತಪ್ಪಿಸಲು ಕಲಾವಿದರು ಜೈವಿಕ ಬಣ್ಣ ಮತ್ತು ಮಣ್ಣನ್ನೇ ಬಳಸಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.
ನಾವು ಸಂಪೂರ್ಣವಾಗಿ ನೈಸರ್ಗಿಕ ಬಣ್ಣಗಳನ್ನೇ ಬಳಕೆ ಮಾಡುತ್ತಿದ್ದೇವೆ. ಹಸಿರು ಗಣೇಶ ಅಭಿಯಾನಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದೆ ಎನ್ನುತ್ತಾರೆ ನಗರದಲ್ಲಿ ಮೂರ್ತಿ ತಯಾರಿಸುತ್ತಿರುವ ಬಹುತೇಕ ಕಲಾವಿದರು.ಮೂರ್ತಿಗಳ ಗಾತ್ರದಲ್ಲಿ ವೈವಿಧ್ಯತೆಯಿದೆ. ಮನೆಯ ಪೂಜೆಗೆ ಬಳಸುವ ಒಂದು ಅಡಿ ಎತ್ತರದ ಮೂರ್ತಿಗಳಿಂದ ಹಿಡಿದು, ಸಾರ್ವಜನಿಕ ಮಂಟಪಗಳಲ್ಲಿ ಪ್ರತಿಷ್ಠಾಪಿಸುವ 15–20 ಅಡಿ ಎತ್ತರದ ಮೂರ್ತಿಗಳ ವರೆಗೆ ಕಲಾವಿದರು ತಯಾರಿಸುತ್ತಾರೆ. ಮೂರ್ತಿಯ ಬಣ್ಣ, ಆಭರಣ, ಅಲಂಕಾರ ಇವೆಲ್ಲವನ್ನೂ ಕಲಾವಿದರು ತಮ್ಮ ಕಲ್ಪನೆ ಹಾಗೂ ಶ್ರಮದಿಂದ ಮಾಡುತ್ತಾರೆ. ಹಬ್ಬದ ಸಂಭ್ರಮದಲ್ಲಿ ತಮ್ಮ ಕಲೆಯೇ ಎಲ್ಲರ ಮನ ಗೆಲ್ಲುತ್ತಿರುವುದನ್ನು ಕಂಡು ಕಲಾವಿದರಿಗೆ ಸಂತೋಷವಾಗುತ್ತದೆ.
ಬೃಹತ್ ಗಾತ್ರದ 40 ಗಣಪ: ಇಲ್ಲಿನ ಬಾಕಳೆ ಗಲ್ಲಿಯಲ್ಲಿ ಪಶ್ಚಿಮ ಬಂಗಾಳದ ಸುಭಾಸ ಕುಯ್ಲಾ ಅವರ ಕಾರ್ಮಿಕರು ಸುಮಾರು 15ರಿಂದ 21 ಅಡಿಯ ಮೂರ್ತಿ ತಯಾರಿಸುತ್ತಿದ್ದಾರೆ. ಆಕರ್ಷಕವಾಗಿ ಗಣೇಶ ಮೂರ್ತಿಗಳ ತಯಾರಿಸಿರುವ ಕಾರ್ಮಿಕರು ಅಂತಿಮ ಹಂತದ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದಾರೆ.ಈ ಹಿಂದೆ ಸಂಜಯ ಪಾಲ್ ಅವರು ಈ ಮೂರ್ತಿಗಳ ತಯಾರಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ವೈಯಕ್ತಿಕ ಕಾರಣಗಳಿಂದ ಅವರು ಆಗಮಿಸಿಲ್ಲ. ಹೀಗಾಗಿ, ಅವರು ನಿರ್ಮಿಸುತ್ತಿದ್ದ ಬಹುತೇಕ ಮೂರ್ತಿಗಳನ್ನು ಸುಭಾಸ ಕುಯ್ಲಾ ಅವರೇ ತಯಾರಿಸುತ್ತಿದ್ದಾರೆ.
ಈ ವರ್ಷ ಕಾರ್ಮಿಕರ ಕೊರತೆ ತುಂಬಾ ಇದೆ. ಪ್ರತಿವರ್ಷ ಹುಬ್ಬಳ್ಳಿಯಲ್ಲೇ 60ಕ್ಕೂ ಅಧಿಕ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದೇವು. ಈ ಬಾರಿ ಕಾರ್ಮಿಕರ ಕೊರತೆಯಿಂದ ಕೆಲಸಕ್ಕೆ ತೊಂದರೆಯಾಗಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಮೂರ್ತಿಗಳಿಗೆ ಬೇಡಿಕೆ ಇದ್ದು, ಅಷ್ಟು ಪ್ರಮಾಣದಲ್ಲಿ ಸಿದ್ಧಪಡಿಸಲು ಆಗುತ್ತಿಲ್ಲ ಎಂಬ ಕೊರಗಿದೆ ಎಂದು ಮೂರ್ತಿ ತಯಾರಕ ಸುಭಾಷ ಕುಯ್ಲಾ ಹೇಳಿದರು.