ಪಟ್ಟಣದ ಟಿಬಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ವಿಸರ್ಜನಾ ಮಹೋತ್ಸವದ ಬೃಹತ್ ಶೋಭಾಯಾತ್ರೆ ಗುರುವಾರ ವಿಜೃಂಭಣೆಯಿಂದ ನೆರವೆರಿತು.
ಕನ್ನಡಪ್ರಭವಾರ್ತೆ ಹೊಸದುರ್ಗ
ಪಟ್ಟಣದ ಟಿಬಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ವಿಸರ್ಜನಾ ಮಹೋತ್ಸವದ ಬೃಹತ್ ಶೋಭಾಯಾತ್ರೆ ಗುರುವಾರ ವಿಜೃಂಭಣೆಯಿಂದ ನೆರವೆರಿತು.ಗಣಪತಿ ವಿಸರ್ಜನೆ ಅಂಗವಾಗಿ ಟ್ರ್ಯಾಕ್ಟರ್‌ನಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿವಿಧ ಹೂಗಳು ಹಾಗೂ ಬಣ್ಣ ಬಣ್ಣದ ವಿನ್ಯಾಸಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಟ್ಟಣದ ಟಿ.ಬಿ. ವೃತ್ತದಲ್ಲಿ ಗಣೇಶ ಮೂರ್ತಿಗೆ ಮಹಾಮಂಗಳಾರತಿ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಜನರು ಸೇರಿದಂತೆ ಪಟ್ಟಣದ ಯುವ ಸಮುದಾಯ ಕೇಸರಿ ರುಮಾಲು-ಶಲ್ಯ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರ ಪಟ್ಟಣ ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಕೇಸರಿ ರುಮಾಲು ಧರಿಸಿ, ಕತ್ತಿಗೆ ಕಾವಿ ಶಾಲು ಸುತ್ತಿಕೊಂಡು, ಕೈಯಲಿ ಶಿವಾಜಿ ಮಹಾರಾಜರ ಹಾಗೂ ಹನುಮಂತನ ಚಿತ್ರವಿದ್ದ ಬೃಹತ್ ಗಾತ್ರದ ಕೇಸರಿ ಧ್ವಜಗಳನ್ನು ಹಿಡಿದು, ದೇಶಾಭಿಮಾನ ಮೂಡಿಸುವ ಘೋಷಣೆ ಮೊಳಗಿಸುತ್ತಾ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು. ಮೆರವಣಿಗೆಯ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆಯ ಅಂಗಡಿ-ಮುಂಗಟ್ಟುಗಳಿಗೆ ಬಾಗಿಲು ಹಾಕಿದ್ದ ವರ್ತಕರು ಸ್ವಯಂ ಪ್ರೇರಿತರಾಗಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಮಕ್ಕಳು, ಕಿರಿಯರು, ಹಿರಿಯರು, ಮಹಿಳೆಯರು ರಸ್ತೆ ಬದಿ, ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಮೇಲೆ ಮತ್ತು ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯ ದೃಶ್ಯವನ್ನು ನೋಡುತ್ತಿರುವುದು ಕಂಡು ಬಂತು. ಬಿಸಿಲನ್ನು ಲೆಕ್ಕಿಸದೇ ಯುವಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯ ಉದ್ದಕ್ಕೂ ಸಂಘಟನೆಯ ವತಿಯಿಂದ ಭಕ್ತರಿಗೆ ಲಘು ಉಪಹಾರ, ನೀರು ಮಜ್ಜಿಗೆ, ತಂಪು ಪಾನೀಯಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಶೋಭಾಯಾತ್ರೆಯು ಟಿಬಿ ವೃತ್ತದಿಂದ ಪ್ರಾರಂಭಗೊಂಡು ಗಾಂಧಿವೃತ್ತ, ಬಸವೇಶ್ವರ ವೃತ್ತ, ಹಿರಿಯೂರು ವೃತ್ತ, ಹುಳಿಯಾರು ವೃತ್ತದ ಮೂಲಕ ಹಾದುಹೋಗಿ ವೀರಭದ್ರಸ್ವಾಮಿ ದೇವಸ್ಥಾನದವರೆಗೂ ಸಾಗಿ ನಂತರ ಮಠದ ಬಾವಿಯ ಬಳಿ ಸಮಾಪ್ತಿಗೊಂಡಿತು. ಪೋಲಿಸ್ ಬಂದೋಬಸ್ತ್: ಶೋಭಾಯಾತ್ರೆಗೆ ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮರವಣಿಗೆ ಸಾಗಿದ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿ ಮೆರವಣಿಗೆ ತೆರಳಲು ಅನುಕೂಲ ಮಾಡಿಕೊಡಲಾಗಿತ್ತು. ಕೆಲ ಪೋಲಿಸರು ಯುವಕರೊಂದಿಗೆ ಕುಣಿಯುತ್ತಲೆ ಕರ್ತವ್ಯ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.