ಕನ್ನಡಪ್ರಭ ವಾರ್ತೆ ಕೊಪ್ಪ
ಭಾನುವಾರ ಬೆಳಿಗ್ಗೆ ಸಂಕಲ್ಪ ಸ್ನಾನದೊಂದಿಗೆ ಶ್ರೀ ವಿಶ್ವಂಭರ ಪೂಜೆ ಹಾಗೂ ಧನ್ವಂತರಿ ಹೋಮದ ಸಂಕಲ್ಪ ನಡೆದವು. ಇದಾದ ನಂತರ ಗುರುಕುಲದ ವಿದ್ಯಾರ್ಥಿಗಳು ಗುರುಕುಲ ದರ್ಶನಂ ರೂಪಕ ನಡೆಸಿಕೊಟ್ಟರು.
ಆರೆಸ್ಸೆಸ್‌ನ ಅಖಿಲ ಭಾರತ ಸಹ ಸಂಪರ್ಕ ಪ್ರಮುಖ್ ಸುನಿಲ್ ದೇಶಪಾಂಡೆ ಮಾತನಾಡಿ ತೀರ್ಥಸ್ನಾನ, ಪುಣ್ಯ ತೀರ್ಥಗಳಿಗೆ ನಮ್ಮ ಧರ್ಮದಲ್ಲಿ ಬಹಳ ಪೂಜ್ಯ ಸ್ಥಾನವಿದೆ. ಗಂಗಾಸಮಾರಾಧನೆಗೆ ವಿಶಿಷ್ಠವಾದ ಹಿನ್ನೆಲೆ ಇದೆ. ಕಾಲ ಕಾಲಕ್ಕೆ ತಂತಾನೇ ಪರಿಶುದ್ಧಳಾಗುವ ನದಿ ಗಂಗೆ. ಗಂಗೆ ನಮ್ಮ ಸಮಾಜದ ಶ್ರೇಷ್ಠತೆಯ ಪ್ರತೀಕ. ಶ್ರವಣ ಸಂಸ್ಕಾರ ಮತ್ತು ದರ್ಶನ ಸಂಸ್ಕಾರಕ್ಕೆ ಅಂತರವಿದೆ, ಇಷ್ಟು ದಿನ ಗುರುಕುಲದ ಬಗ್ಗೆ ಕೇಳಿದ್ದುಂಟು. ಆದರೆ ಈ ಎರಡು ದಿನದಲ್ಲಿ ಗುರುಕುಲ ಮಾದರಿಯ ಪ್ರತ್ಯಕ್ಷ ದರ್ಶನವಾಗಿದೆ. ಹಿಂದೂ ಸಮಾಜಕ್ಕೆ ಹೊರಗಿನ ದಾಳಿಗಳಿಗಿಂತ ಒಳಗಿನ ಕುಸಿತಗಳೇ ಪ್ರಬಲವಾದ ಸಮಸ್ಯೆಯಾಗಿದೆ. ಹೊರಗಿನವರಿಗೆ ಕಿಂಚಿತ್ತೂ ತೊಂದರೆ ಕೊಡದ ನಾವು ನಮ್ಮ ಸಮಾಜಕ್ಕೇ ಅನೇಕ ಸಮಸ್ಯೆಗಳನ್ನು ತಂದುಕೊAಡಿದ್ದೇವೆ. ಸರಿಯಾದ ಶಿಕ್ಷಣ ಸಿಕ್ಕಾಗ ಅನಂತ ಚಿಂತನೆಗಳು ಅರಳುತ್ತವೆ. ವೀರ ಸಾವರ್ಕರ್‌ರಂತಹ ಮಹಾನ್ ವ್ಯಕ್ತಿಗಳು ಕಂಡ ಗುರುಕುಲ ಶಿಕ್ಷಣದ ಕನಸು ಇಲ್ಲಿ ನನಸಾಗುತ್ತಿದೆ. ಹಣ ಸಂಪಾದನೆಗಾಗಿ ಶಿಕ್ಷಣ ಅಲ್ಲ, ಗುಣ ಸಂಪಾದನೆಗೆ ಶಿಕ್ಷಣ ಎಂದು ನುಡಿದರು.ಈ ಸಂದರ್ಭದಲ್ಲಿ ಪ್ರಬೋಧಿನಿ ಗುರುಕುಲದ ನವೀಕೃತ ವೆಬ್ ಸೈಟ್ www.prabodhinigurukula.org ಅನ್ನು ಸುಧೀರ್ ಲೋಕಾರ್ಪಣೆ ಮಾಡಿದರು.
ಕೊಪ್ಪ ತಾಲೂಕಿನಲ್ಲಿ ನಡೆದ ಹಿಂದೂ ಸಮಾಜೋತ್ಸವಗಳ ನಿರ್ವಹಣಾ ಸಮಿತಿಯ ಕಾರ್ಯಕರ್ತರು, ಹರಿಹರಪುರ ಹೋಬಳಿಯ ನಾಗರಿಕರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.