ಕನ್ನಡಪ್ರಭ ವಾರ್ತೆ ಚಿಂತಾಮಣಿ
ವಾಣಿಜ್ಯ ನಗರಿ ಚಿಂತಾಮಣಿಯ ನರಸಿಂಹಪೇಟೆಯ ಗ್ರಾಮದೇವತೆ ಶ್ರೀ ಗಂಗಾಭವಾನಿ ದೇವಿಯ ೨೧ನೇ ವಾರ್ಷಿಕೋತ್ಸವದ ಪ್ರಯುಕ್ತ ಗಂಗಾಭವಾನಿ ಅಮ್ಮನವರ ಗಂಗಜಾತ್ರೆ ಪುಂಗನೂರು ಶೈಲಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು.ಶಕ್ತಿ ದೇವತೆಯೆಂದು ಪ್ರಸಿದ್ಧಿ ಪಡೆದಿರುವ ಗಂಗಾಭವಾನಿ ಅಮ್ಮನವರ ಜಾತ್ರೆಯನ್ನು ಪ್ರತಿ ವರ್ಷ ನಗರ ಹಾಗೂ ನರಸಿಂಹಪೇಟೆಯ ಸುತ್ತಮುತ್ತಲಿನ ಬಡಾವಣೆಗಳ ನಾಗರಿಕರು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಜಾತ್ರೆಯ ಪ್ರಯುಕ್ತ ಗಂಗಾಭವಾನಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು, ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಗಂಗಜಾತ್ರೆಯ ಪ್ರಯುಕ್ತ ನಗರದ ನರಸಿಂಹಪೇಟೆ, ಅಂಬೇಡ್ಕರ್ ಕಾಲೋನಿ, ಎನ್‌ಎನ್‌ಟಿ ರಸ್ತೆ, ಗಜಾನನ ವೃತ್ತ, ಟ್ಯಾಂಕ್ ಬಂಡ್ ರಸ್ತೆ, ವೆಂಕಟಗಿರಿಕೋಟೆ, ತಪತೇಶ್ವರ ಕಾಲೋನಿ, ವಿನಾಯಕ ನಗರ, ಸೊಣ್ಣಶೆಟ್ಟಿಹಳ್ಳಿ, ಚೌಡರೆಡ್ಡಿಪಾಳ್ಯ, ಎನ್.ಆರ್.ಬಡಾವಣೆ, ಆಶ್ರಯ ಬಡಾವಣೆ, ಕೆ.ಆರ್.ಬಡಾವಣೆ ಸೇರಿ ಪಟಾಲಮ್ಮ ದೇವಸ್ಥಾನ ಸುತ್ತಮುತ್ತಲಿನ ಸಹಸ್ರಾರು ಮಹಿಳೆಯರು, ಗಂಗಾಭವಾನಿ ಅಮ್ಮನವರಿಗೆ ವಿಶೇಷವಾಗಿ ತಯಾರಿಸಿದ್ದ ತಂಬಿಟ್ಟು ದೀಪಗಳನ್ನು ಹೊತ್ತು ಮೆರವಣಿಗೆ ಮೂಲಕ ಗಂಗಾಭವಾನಿ ದೇವಾಲಯಕ್ಕೆ ಆಗಮಿಸಿ, ಪೂಜೆ ಸಲ್ಲಿಸುವ ಮೂಲಕ ಹರಕೆ ಸಲ್ಲಿಸಿದರು.ಮಂಗಳವಾರ ರಾತ್ರಿ ಅಲಂಕೃತ ಪಲ್ಲಕ್ಕಿಯಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಪುಂಗನೂರು ಶೈಲಿಯಲ್ಲಿ ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಕೊಳಲು ವಾದನ ಸಹಿತ ನೃತ್ಯ ಪ್ರದರ್ಶನ, ಮಹಿಳೆಯರ ಕೋಲಾಟ, ತಮಟೆ ವಾದ್ಯಗಳ ಸದ್ದಿಗೆ ಯುವಕರ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.
ಚಿಂತಾಮಣಿ ನಗರ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಅಮ್ಮನವರ ಗಂಗಜಾತ್ರೆಯಲ್ಲಿ ಪಾಲ್ಗೊಂಡು ಅಮ್ಮನವರ ದರ್ಶನವನ್ನು ಪಡೆದರು. ಗಂಗಜಾತ್ರೆಯ ಅಂಗವಾಗಿ ಚಿಂತಾಮಣಿ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕೋಲಾರ ರಸ್ತೆಯ ವಿನಾಯಕ ನಗರದಲ್ಲಿ ಗಂಗಜಾತ್ರೆ ಅಂಗವಾಗಿ ಮಾಡಿದ್ದ ವಿಶೇಷ ದೀಪಾಲಂಕಾರ ನೋಡುಗರ ಗಮನ ಸೆಳೆದವು. ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳಲ್ಲಿ ಜಾತ್ರೆಗೆ ಸ್ವಾಗತಿಸುವ ಸ್ವಾಗತ ಕಮಾನುಗಳನ್ನು ನಿಲ್ಲಿಸಲಾಗಿತ್ತು.