ಗಂಗಾವತಿ ನಗರಸಭೆ: ಮೇ 2 ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

KannadaprabhaNewsNetwork |  
Published : May 01, 2025, 12:51 AM IST
29ುಲು3 | Kannada Prabha

ಸಾರಾಂಶ

ಶಾಸಕ ಜನಾರ್ದನ ರೆಡ್ಡಿ ಸೂಚನೆಯಲ್ಲಿ ಈಗಾಗಲೇ 12 ತಿಂಗಳಲ್ಲಿ 6 ತಿಂಗಳು ಅಧ್ಯಕ್ಷರಾಗಿ ಮೌಲಾಸಾಬ್‌ ಮತ್ತು ಉಪಾಧ್ಯಕ್ಷರಾಗಿ ಪಾರ್ವತಮ್ಮ ದುರುಗೇಶ ಅಧಿಕಾರ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಮಮೂರ್ತಿ ನವಲಿ

ಗಂಗಾವತಿ:

ಇಲ್ಲಿಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೇ 2ರಂದು ಚುನಾವಣೆ ನಡೆಯಲಿದ್ದು, ಬಹುಮತವಿರುವ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ 34ನೇ ವಾರ್ಡಿನ ಪಾರ್ವತಮ್ಮ ಬಾಲಾಜಿ ಹೆಸರು ಅಂತಿಮವಾಗಿದೆ.

ಶಾಸಕ ಜನಾರ್ದನ ರೆಡ್ಡಿ ಸೂಚನೆಯಲ್ಲಿ ಈಗಾಗಲೇ 12 ತಿಂಗಳಲ್ಲಿ 6 ತಿಂಗಳು ಅಧ್ಯಕ್ಷರಾಗಿ ಮೌಲಾಸಾಬ್‌ ಮತ್ತು ಉಪಾಧ್ಯಕ್ಷರಾಗಿ ಪಾರ್ವತಮ್ಮ ದುರುಗೇಶ ಅಧಿಕಾರ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಖಾಲಿಯಾಗಿರುವ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಬ) ಮೀಸಲಾತಿ ಹೊಂದಿದ್ದು 11ನೇ ವಾರ್ಡಿನ ಪರುಶರಾಮ ಮಡ್ಡೇರ, 19ನೇ ವಾರ್ಡಿನ ಅಜಯ್ ಬಿಚ್ಚಾಲಿ, 17ನೇ ವಾರ್ಡಿನ ನೀಲಕಂಠ ಕಟ್ಟಿಮನಿ, 2ನೇ ವಾರ್ಡಿನ ಹೀರಾಬಾಯಿ ಹೆಸರು ಕೇಳಿ ಬರುತ್ತದೆ.

ಹಿರಿಯ ಸದಸ್ಯ ಪರುಶರಾಮ ಮಡ್ಡೇರ ತಮಗೆ ಅಧ್ಯಕ್ಷ ಸ್ಥಾನ ನೀಡಲೇಬೇಕೆಂದು ಶಾಸಕರಿಗೆ ಒತ್ತಾಯಿಸುತ್ತಿದ್ದಾರೆ. ಅಲ್ಲದೇ ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ ಅವರ ಶಿಫಾರಸು ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ ಅಜಯ್ ಬಿಚ್ಚಾಲಿ, ನೀಲಕಂಠ ಕಟ್ಟಿಮನಿ ಸಹ ರೇಸ್‌ನಲ್ಲಿದ್ದಾರೆ. ಹೀರಾಬಾಯಿ ಸಹ ಮಹಿಳೆಯರಿಗೆ ಆದ್ಯತೆ ನೀಡಬೇಕೆಂದು ಶಾಸಕರಿಗೆ ಒತ್ತಾಯಿಸಿದ್ದಾರೆ.

ಪಾರ್ವತಮ್ಮ ಉಪಾಧ್ಯಕ್ಷೆ:

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬೆಂಬಲಿಸಿದ್ದ ಪಾರ್ವತಮ್ಮ ಬಾಲಾಜಿಗೆ ಉಪಾಧ್ಯಕ್ಷ ಸ್ಥಾನ ಬಹುತೇಕ ಖಚಿತವಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇಲ್ಲದ ಕಾರಣ ಅಂತಿಮವಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ಮೌನ:

ಕಳೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿದ್ದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿತ್ತು. ಈ ಕಾರಣಕ್ಕಾಗಿ ಈಗ ಚುನಾವಣೆ ಗೋಜಿಗೆ ಹೋಗದೆ ಮೌನವಹಿಸಿದೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇರುವುದರಿಂದ ಸದಸ್ಯರು ಚುನಾವಣೆ ಸಹವಾಸವೇ ಬೇಡ ಎಂದು ದೂರುವುಳಿದಿದ್ದಾರೆ.

ನಗರಸಭೆ ಒಟ್ಟು 35 ಸದಸ್ಯರ ಸಂಖ್ಯಾಬಲ ಹೊಂದಿದ್ದು ಬಿಜೆಪಿ 14, ಪಕ್ಷೇತರ 2, ವಲಸೆ ಕಾಂಗ್ರೆಸ್ ಸದಸ್ಯರು 9, ಜೆಡಿಎಸ್ 2 ಸೇರಿದಂತೆ 27 ಸದಸ್ಯರ ಬೆಂಬಲ ಬಿಜೆಪಿಗಿದೆ. ಕಾಂಗ್ರೆಸ್ 8 ಸದಸ್ಯರನ್ನು ಹೊಂದಿದೆ.

ಮೇ 2ರಂದು ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸಾಮಾಜಿಕ ನ್ಯಾಯದಂತೆ ಸದಸ್ಯರಿಗೆ ಅಧಿಕಾರ ಹಂಚಿಕೆ ಮಾಡಲಾಗುತ್ತದೆ. ಅಂದೇ ಅದ್ಯಕ್ಷರ ಹೆಸರು ಅಂತಿಮವಾಗಲಿದೆ.

ಗಾಲಿ ಜನಾರ್ದನ ರೆಡ್ಡಿ ಶಾಸಕ

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ