ಗಂಗಾವತಿ ನಗರಸಭೆ ಬಿಜೆಪಿ ತೆಕ್ಕೆಗೆ

KannadaprabhaNewsNetwork | Published : Aug 27, 2024 1:34 AM

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿಯ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದ ಬಿಜೆಪಿ ಸದಸ್ಯ ಮೌಲಾಸಾಬ್ ಮತ್ತು ಉಪಾಧ್ಯಕ್ಷರಾಗಿ ಪಾರ್ವತಮ್ಮ ದೊಡ್ಮನಿ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷರಾಗಿ ಮೌಲಾಸಾಬ್, ಉಪಾಧ್ಯಕ್ಷೆಯಾಗಿ ಪಾರ್ವತಮ್ಮ ದೊಡ್ಮನಿ ಆಯ್ಕೆ

ಕನ್ನಡಪ್ರಭ ವಾರ್ತೆ ಗಂಗಾವತಿ

ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿಯ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದ ಬಿಜೆಪಿ ಸದಸ್ಯ ಮೌಲಾಸಾಬ್ ಮತ್ತು ಉಪಾಧ್ಯಕ್ಷರಾಗಿ ಪಾರ್ವತಮ್ಮ ದೊಡ್ಮನಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ನಗರಸಭೆ ಸಭಾಂಗಣದಲ್ಲಿ ಸೋಮವಾರ ಜರುಗಿದ ಚುನಾವಣೆಯಲ್ಲಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮೌಲಾಸಾಬ್ 28 ಮತಗಳು, ಅದೇ ರೀತಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಾರ್ವತಮ್ಮ ದೊಡ್ಮನಿ 28 ಮತಗಳು ಪಡೆಯುವ ಮೂಲಕ ಆಯ್ಕೆಯಾದರು.ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಸಿಂಸಾಬ ಗದ್ವಾಲ್, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹುಲಿಗೆಮ್ಮ ಕಿರಿಕಿರಿ ತಲಾ 8 ಮತಗಳನ್ನು ಪಡೆದು ಪರಾಭವಗೊಂಡರು. ಇದರಿಂದ ಕಾಂಗ್ರೆಸ್‌ ತೀವ್ರ ಮುಖಭಂಗ ಉಂಟಾದಂತೆ ಆಗಿದೆ.

ನಗರಸಭೆಯ ಒಟ್ಟು 35 ಸದಸ್ಯರು ಮತ್ತು ಶಾಸಕರ ಬೆಂಬಲ ಸೇರಿದಂತೆ 36 ಸದಸ್ಯರ ಸಂಖ್ಯೆಬಲ ಇತ್ತು. ಅದರಲ್ಲಿ ಬಿಜೆಪಿ 14, ಜೆಡಿಎಸ್ 2, ಪಕ್ಷೇತರ ಸದಸ್ಯರು 2, ಕಾಂಗ್ರೆಸ್ ವಲಸಿತ ಸದಸ್ಯರು 9, ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ 28 ಮಂದಿ ಕೈ ಎತ್ತುವ ಮೂಲಕ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಬಹುಮತ ಹೊಂದಿದ್ದ ಬಿಜೆಪಿಯ ಮೌಲಾಸಾಬ್ ಅಧ್ಯಕ್ಷರಾಗಿ, ಪಾರ್ವತಮ್ಮ ದೊಡ್ಮನಿ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದರು. ಕೇವಲ 8 ಸದಸ್ಯರನ್ನು ಇಟ್ಟುಕೊಂಡಿದ್ದ ಕಾಂಗ್ರೆಸ್ ಪರಾಭವಗೊಂಡಿತು.

ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಈ ಸಂದರ್ಭ ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಡಾ. ಬಸವರಾಜ್, ಗಿರೇಗೌಡ, ಪೌರಾಯುಕ್ತ ವಿರೂಪಾಕ್ಷಮೂರ್ತಿ ಇದ್ದರು.

ಎಲ್ಲರಿಗೂ ತೃಪ್ತಿನಗರಸಭೆಯಲ್ಲಿ 28 ಸದಸ್ಯರಲ್ಲಿ 14 ಬಿಜೆಪಿ ಮೂಲ ಸದಸ್ಯರು ಇದ್ದರೂ ಸಹ ಅಧ್ಯಕ್ಷಗಿರಿ ಸಿಗಲಿಲ್ಲ. ಆದರೆ ಬಿಜೆಪಿಗೆ ಬೆಂಬಲಿಸಿದ ಕಾಂಗ್ರೆಸ್ 9 ವಲಸಿತ ಸದಸ್ಯರಿಗೆ ಅಧಿಕಾರ ಸಿಕ್ಕಿದೆ. ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಮುಖಂಡರು ತೃಪ್ತಿ ಮಾಡಿಕೊಂಡಿದ್ದಾರೆ.ಚುನಾವಣೆ ಪೂರ್ವ ಶಾಸಕ ಗಾಲಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಬಿಜೆಪಿ ಮುಖಂಡರು ಮೂಲ ಬಿಜೆಪಿಯವರಿಗೆ ಅಧಿಕಾರ ನೀಡಿ ಎಂದು ಸಲಹೆ ನೀಡಿದ್ದರು. ಆದರೆ ಶಾಸಕರು ಅಲ್ಪಸಂಖ್ಯಾತರಿಗೆ ಈ ಬಾರಿ ಅಧಿಕಾರ ನೀಡಬೇಕೆಂದು ಯೋಚಿಸಿ ವಲಸಿತ ಸದಸ್ಯ ಮೌಲಾಸಾಬ ಅವರಿಗೆ ಪಟ್ಟ ನೀಡಲು ಯಶಸ್ವಿಯಾದರು.

ಇನ್ನು ಮೂಲ ಬಿಜೆಪಿಗೆ ಅಧಿಕಾರ ಇಲ್ಲ. ಕಾಂಗ್ರೆಸ್‌ನಿಂದ ಜಯ ಸಾಧಿಸಿ, ನಗರಸಭೆ ಚುಕ್ಕಾಣಿ ಹಿಡಿದಿರುವುದು ತೃಪ್ತಿ ತಂದಿದೆ ಎಂದು ಕಾಂಗ್ರೆಸ್ ಮುಖಂಡರು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ.

Share this article