ಗಾಂಜಾ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ: ಗಿರೀಶ ಭಾಂಡಗೆ

KannadaprabhaNewsNetwork |  
Published : Oct 18, 2026, 03:30 AM IST
(ಫೋಟೊಬಿಕೆಟಿ3, ಬಾಗಲಕೋಟೆ ನಗರದಲ್ಲಿ ಗಾಂಜಾ ಪ್ರಕರಣ: ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಗಿರೀಶ್ ಫೌಂಡೇಶನ್ ವತಿಯಿಂದ ಜಿಲ್ಲಾ ಪೊಲೀಸ್ ಆಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು) | Kannada Prabha

ಸಾರಾಂಶ

ಬಾಗಲಕೋಟೆ ನಗರದಲ್ಲಿ ಗಾಂಜಾ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಗಿರೀಶ್ ಫೌಂಡೇಶನ್ ವತಿಯಿಂದ ಜಿಲ್ಲಾ ಪೊಲೀಸ್ ಆಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದಲ್ಲಿ ಇತ್ತೀಚೆಗೆ ಸುಮಾರು 700 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಗಿರೀಶ್ ನಾರಾಯಣಸಾ ಭಾಂಡಗೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.

ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳ ಪಾತ್ರದ ಕುರಿತು ಸಮಗ್ರ ತನಿಖೆ ನಡೆಯಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾದ ಬೈಕ್ ಹಾಗೂ ಗೂಡ್ಸ್ ವಾಹನಗಳನ್ನು ಬಿಡುಗಡೆ ಮಾಡಿರುವ ಬಗ್ಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಈ ಹಿನ್ನೆಲೆಯಲ್ಲಿ ವಾಹನಗಳ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳು, ಆದೇಶಗಳು ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಬೇಕು ಎಂದವರು ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಬೇಕು. ಹಣ ಪಡೆದು ವಾಹನ ಬಿಡುಗಡೆ ಮಾಡಲಾಗಿದೆ ಎಂಬ ಆರೋಪಗಳಿದ್ದಲ್ಲಿ, ಅವುಗಳ ಸತ್ಯಾಸತ್ಯತೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ನಡೆಸಬೇಕು. ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಮಾದಕ ವಸ್ತುಗಳ ಹಾವಳಿ ಯುವಜನರ ಭವಿಷ್ಯ ಮತ್ತು ಸಮಾಜದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ವ್ಯಕ್ತಿ ಅಥವಾ ಪ್ರಭಾವಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಂತ ಅಗತ್ಯವಾಗಿದೆ. ಪೊಲೀಸ್ ಇಲಾಖೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಪ್ರಕರಣದ ತನಿಖೆಯ ಪ್ರಗತಿ ಹಾಗೂ ಕೈಗೊಂಡ ಕ್ರಮಗಳ ಕುರಿತು ಕಾನೂನುಬದ್ಧವಾಗಿ ಮಾಹಿತಿ ನೀಡಬೇಕು ಎಂದವರು ಹೇಳಿದ್ದಾರೆ.ಬಾಕ್ಸ್---ಗಿರೀಶ ಫೌಂಡೇಶನ್‌ ಪ್ರಮುಖ ಬೇಡಿಕೆಗಳು:

ಗಾಂಜಾ ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪ್ರಕರಣದ ಮುಖ್ಯ ಆರೋಪಿಗಳ ಪಾತ್ರವನ್ನು ಪತ್ತೆಹಚ್ಚಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ವಶಪಡಿಸಿಕೊಂಡ ಬೈಕ್ ಮತ್ತು ಗೂಡ್ಸ್ ವಾಹನಗಳ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಕಾನೂನು ಪ್ರಕ್ರಿಯೆ ಪರಿಶೀಲಿಸಬೇಕು. ವಾಹನಗಳ ಬಿಡುಗಡೆಗೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರ ನಡೆದಿರುವ ಆರೋಪಗಳಿದ್ದರೆ ಅವುಗಳ ಕುರಿತು ತನಿಖೆ ನಡೆಸಬೇಕು. ತನಿಖೆಯಲ್ಲಿ ಕರ್ತವ್ಯಲೋಪ ಅಥವಾ ಅಕ್ರಮ ನಡೆದಿರುವುದು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ತಡೆಯಲು ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಿ, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಬೇಕು.

ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಯಾವುದೇ ಆರೋಪದ ಸತ್ಯಾಸತ್ಯತೆಯನ್ನು ಪೂರ್ವನಿರ್ಧಾರ ಮಾಡದೆ, ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಸಾರ್ವಜನಿಕರ ಮುಂದೆ ತರಬೇಕು ಎಂದು ಗಿರೀಶ ನಾರಾಯಣಸಾ ಭಾಂಡಗೆ ಅವರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಸ್ತಿಗಾಗಿ ಸೊಸೆ, ಮೊಮ್ಮಕ್ಕಳೊಂದಿಗೆ ಪುತ್ರನನ್ನೇ ಕೊಂದ
ಜೆನ್‌ ಝೀಗಳ ದಾರಿತಪ್ಪಿಸುತ್ತಿರುವ ಸಿಜೆಪಿ: ಬಿ.ವೈ. ರಾಘವೇಂದ್ರ