ಗಾಂಜಾ ಕೇಸ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಸುಳ್ಳು ಕೇಸ್‌ ದಾಖಲಿಸಿದ ಪೊಲೀಸ್ : ತನಿಖೆ ನಡೆಸುವಂತೆ ಹೈಕೋರ್ಟ್‌ ಆದೇಶ

KannadaprabhaNewsNetwork |  
Published : Sep 16, 2024, 01:54 AM ISTUpdated : Sep 16, 2024, 09:02 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಗಾಂಜಾ ಕೇಸ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಸುಳ್ಳು ಕೇಸ್‌ ದಾಖಲಿಸಿದ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್‌ ಆದೇಶ ಹೊರಡಿಸಿದೆ.

  ಬೆಂಗಳೂರು :  ಗಾಂಜಾ ಸೇವನೆ ಆರೋಪ ಮೇಲೆ ಇಬ್ಬವರು ವಿದ್ಯಾರ್ಥಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ 2019ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವರ್ತೂರು ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹೈಕೋರ್ಟ್‌ ಆದೇಶಿಸಿದೆ.

ಗಾಂಜಾ ಸೇವನೆ ಆರೋಪದ ಮೇಲೆ ತಮ್ಮ ವಿರುದ್ಧದ ದಾಖಲಿಸಿದ್ದ ಪ್ರಕರಣ ರದ್ದುಪಡಿಸಲು ಕೋರಿ ಹನುಮಂತ ಮತ್ತು ಮಂಜುನಾಥ್‌ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿದಾರರ ವಿರುದ್ಧದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎರಡನೇ ಎಸಿಎಂಎಂ ನ್ಯಾಯಾಲಯದಲ್ಲಿ ಬಾಕಿಯಿದ್ದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದಲ್ಲಿ ಅರ್ಜಿದಾರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅರ್ಜಿದಾರರ ರಕ್ತದಲ್ಲಿ ಗಾಂಜಾ ಅಂಶಗಳು ಪತ್ತೆಯಾಗಿಲ್ಲ ಎಂದು ಎಫ್‌ಎಸ್‌ಎಲ್‌ ವರದಿ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಅರ್ಜಿದಾರರು ಗಾಂಜಾ ಸೇವಿಸಿರುವುದು ಎಫ್‌ಎಸ್‌ಎಲ್‌ ವರದಿ ದೃಢಪಡಿಸಿದೆ ಎಂದು ಪ್ರಕರಣದ ತನಿಖಾಧಿಕಾರಿಯಾಗಿದ್ದ 2019ರಲ್ಲಿ ಪ್ರೊಬೆಷನರಿ ಸೇವೆಯಲ್ಲಿದ್ದ ವರ್ತೂರು ಠಾಣಾ ಸಬ್‌ ಇನ್‌ಸ್ಪೆಕ್ಟರ್‌ ರಾಜ್‌ಕುಮಾರ್‌ ಅವರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ವರದಿಯನ್ನು ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್‌ (ಮಾದಕ ವಸ್ತು ಶೋಧನೆ/ ಜಪ್ತಿ ಮಾಡುವ ಅಧಿಕಾರ ಹೊಂದಿರುವ ಅಧಿಕಾರಿ) ಒಪ್ಪಿದ್ದಾರೆ. ಇದು ಕಾನೂನು ಬಾಹಿರ ಕ್ರಮ ಎಂದು ಹೈಕೋರ್ಟ್‌ ಹೇಳಿದೆ.

ಅಲ್ಲದೆ, ಅರ್ಜಿದಾರರಿಂದ 15 ಗ್ರಾಂ ಗಾಂಜಾ ಸ್ವೀಕರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಅದು ಎಲ್ಲಿದೆ? ಏನಾಯ್ತು ಎಂಬುದನ್ನು ಎಂಬುದೇ ನಿಗೂಢವಾಗಿದೆ. ಒಮ್ಮೆ ಮಾದಕ ವಸ್ತುವನ್ನು ವಶಪಡಿಸಿಕೊಂಡರೆ, ಅದರ ಪಂಚನಾಮೆ, ದಾಸ್ತಾನು ಮಾಡಬೇಕು. ಅದರ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು. ಪ್ರಕರಣದಲ್ಲಿ 15 ಗ್ರಾಂ ಪಂಚನಾಮೆ ಮಾಡಲಾಗಿದೆ ಎಂಬುದು ನಂಬುವಂತಹದ್ದಲ್ಲ. ಅದರಿಂದ ಅರ್ಜಿದಾರರು ಗಾಂಜಾ ಸೇವನೆ ಸಹ ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.

ದೋಷಾರೋಪ ಪಟ್ಟಿಯಲ್ಲಿ 10 ಸಾಕ್ಷಿಗಳಿದ್ದಾರೆ ಎಂದು ಹೇಳಿದ್ದರೂ ಒಬ್ಬರನ್ನೂ ಪಟ್ಟಿ ಮಾಡಿ ವಿಚಾರಣೆಗೆ ಒಳಪಡಿಸಿಲ್ಲ. ತನಿಖಾಧಿಕಾರಿ ಯಾವ ರೀತಿ ತನಿಖೆ ನಡೆಸಿದ್ದಾರೆ ಮತ್ತು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಪ್ರಕರಣ ದಾಖಲಾದಾಗ ಅರ್ಜಿದಾರರು ವಿದ್ಯಾರ್ಥಿಗಳಾಗಿದ್ದು, ರಾಜಕುಮಾರ್‌ ಕಾರ್ಯವೈಖರಿಯಿಂದ ಅವರು ಇಂದಿಗೂ ಸಹ ತೊಂದರೆ ಅನುಭವಿಸುತ್ತಿದ್ದಾರೆ. ವಿದೇಶದಲ್ಲಿ ಉದ್ಯೋಗವಕಾಶ ಕಳೆದುಕೊಂಡರು, ಅರ್ಜಿದಾರರನ್ನು ದುರುದ್ದೇಶಪೂರ್ವಕವಾಗಿ ಅಭಿಯೋಜನೆ ಗುರಿಪಡಿಸಲಾಗಿದೆ. ಆದ್ದರಿಂದ ಅಂದಿನ ಠಾಣಾಧಿಕಾರಿ ಹಾಗೂ ರಾಜಕುಮಾರ್‌ ವಿರುದ್ಧ ಇಲಾಖಾ ತನಿಖೆ ನಡೆಸಿ 12 ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಪೀಠ ಹೇಳಿದೆ.

ಮಾದಕ ವಸ್ತುಗಳನ್ನು ಹೊಂದಿದ್ದವರು ಸಿಕ್ಕಿಬಿದ್ದಲ್ಲಿ ಅವರನ್ನು ಕೂಡಲೇ ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್‌ 42ರಲ್ಲಿ ವ್ಯಾಖ್ಯಾನಿಸಲಾಗಿರುವ ಎಂಪವರ್ಡ್‌ ಆಫೀಸರ್‌ ಆಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಬಕಾರಿ, ನಾರ್ಕೋಟಿಕ್‌, ಕಸ್ಟಮ್ಸ್‌, ಕಂದಾಯ ವಿಚಕ್ಷಣಾ, ಕೇಂದ್ರ ಸರ್ಕಾರದ ಅಧೀನ ಸಂಸದೀಯ ಪಡೆಯ ಮತ್ತು ಸಶಸ್ತ್ರ ಪಡೆಯ, ಪೊಲೀಸರು, ಡ್ರಗ್‌ ಕಂಟ್ರೋಲ್‌ ಇನ್ನಿತರ ಇಲಾಖೆಗಳ ಗೆಜೆಟೆಡ್‌ ಅಧಿಕಾರಿಗಳು ಅಥವಾ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಹಾಜರುಪಡಿಸಬೇಕು. ಈ ನಿಯಮವನ್ನು ಸೆಕ್ಷನ್‌ 50 ಪ್ರತಿಪಾದಿಸುತ್ತದೆ. ಅಧಿಕಾರಿಗಳು ಈ ನಿಯಮ ಪಾಲಿಸದ ಹಲವು ಪ್ರಕರಣಗಳು ಕೋರ್ಟ್‌ ಮುಂದೆ ಬರುತ್ತಿವೆ. ಆದ್ದರಿಂದ ಎನ್‌ಡಿಪಿಎಸ್‌ ಸೆಕ್ಷನ್‌ 50 ಮತ್ತು 52 ನಿಯಮ ಪಾಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯ ಡಿಜಿಪಿ ಹಾಗೂ ಗೃಹ ಇಲಾಖೆಗೆ ಆದೇಶಿಸಬೇಕು ಎಂದು ಪೀಠ ಹೇಳಿದೆ.

ಪ್ರಕರಣದ ವಿವರ:

ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ 2019ರ ಆ.31ರಂದು ಅರ್ಜಿದಾರರನ್ನು ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರೊಬೆಷನರಿ ಪೊಲೀಸ್‌ ಅಧಿಕಾರಿ ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದ ರಾಜಕುಮಾರ್‌ ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಅರ್ಜಿದಾರರ ವಿರುದ್ಧ ಗಾಂಜಾ ಸೇವನೆ ಆರೋಪದ ಮೇಲೆ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ಕಾಯ್ದೆಯಡಿ ಸೆಕ್ಷನ್‌ 27 ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ರದ್ದು ಕೋರಿ ಅರ್ಜಿದಾರರ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!