ಬೈಂದೂರು: ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡೋಣ, ಉಳಿದ ಸಂದರ್ಭದಲ್ಲಿ ಅಭಿವೃದ್ಧಿ ಕಡೆಗಷ್ಟೆ ಗಮನ ಹರಿಸೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಅವರು ಭಾನುವಾರ ಸಂಜೆ ಇಲ್ಲಿ ನಡೆದ ಬೈಂದೂರು ಉತ್ಸವದಲ್ಲಿ ಭಾಗವಹಿಸಿ, ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ರಾಜಕಾರಣ ಮಾಡಿಲ್ಲ, ಮುಂದೂ ಮಾಡುವುದೂ ಇಲ್ಲ, ಅಭಿವೃದ್ಧಿಗಷ್ಟೇ ಆದ್ಯತೆ ನೀಡುತ್ತೇನೆ ಎಂದರು. ಮಹಾತ್ಮ ಗಾಂಧಿಯವರ ಪರಿಕಲ್ಪನೆಯಂತೆ ಶಾಸಕ ಗುರುರಾಜ್ ಗಂಟಿಹೊಳೆ ಅವರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಸ್ವರಾಜ್, ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಮಹಾತ್ಮ ಗಾಂಧಿ ಹೇಳಿದಂತೆ, ಭಾರತದ ಹಳ್ಳಿಗಳ ದೇಶ, ಹಳ್ಳಿಗಳು ಅಭಿವೃದ್ಧಿಯಾಗಬೇಕು, ಮಹಿಳೆಯರು ಸಬಲೀಕರಣ ಆಗಬೇಕು ಎಂದು ಸಚಿವರು ಹೇಳಿದರು. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಶಾಸಕ ಗುರುರಾಜ್ ಗಂಟಿಹೊಳೆ ಅವರು ಕೂಡ ಅವರ ಪಕ್ಷಕ್ಕೆ ನಿಷ್ಟಾವಂತ. ಆದರೆ, ನಾವು ಜನಪ್ರತಿನಿಧಿಗಳಾಗಿ ಸಾಮಾಜಿಕ ದೃಷ್ಟಿಯಿಂದ ನೋಡಬೇಕು, ಸಾಮಾಜಿಕ ಕಾಳಜಿ, ಬದ್ಧತೆ ಕೆಲಸ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಿ, ಉಳಿದ ಸಮಯದಲ್ಲಿ ಅಭಿವೃದ್ಧಿಗೆ ಗಮನಹರಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ, ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ ಯೋಜನೆಗಳಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನ ಆಗಿದೆ. ನಮ್ಮ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಮುಂದುವರಿದ ಭಾಗವಾಗಿ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್, ಗೃಹಲಕ್ಷ್ಮಿ ಡಿಜಿಟಲ್ ಆ್ಯಪ್ ಶೀಘ್ರವೆ ಜಾರಿಗೆ ಬರಲಿವೆ ಎಂದರು. ಇದೇ ಸಂದರ್ಭದಲ್ಲಿ ಬೈಂದೂರು ಉತ್ಸವದ ಪ್ರಯುಕ್ತ ಸಚಿವೆ ಅವರನ್ನು ಶಾಸಕ ಗುರುರಾಜ್ ಗಂಟಿಹೊಳೆ ಸನ್ಮಾನಿಸಿದರು. ಈ ವೇಳೆ ಶಾಸಕ ಗುರುರಾಜ್ ಗಂಟಿಹೊಳೆ, ಆಳ್ವಾ ಶಿಕ್ಷಣ ಸಂಸ್ಥೆಗಳು ಅಧ್ಯಕ್ಷ ಮೋಹನ್ ಆಳ್ವ, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್, ಎಎಸ್ಪಿ ಸುಧಾಕರ್, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.