ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಬಾಳೆಹೊನ್ನೂರಿನಿಂದ ಚಿಕ್ಕಮಗಳೂರಿಗೆ ತೆರಳುವ ಮುಖ್ಯರಸ್ತೆಯ ಎಲೆಕಲ್ಲು ಅರಣ್ಯ ಬದಿಯಲ್ಲಿ ಕೆಲವರು ನಿತ್ಯ ಬೇಕಾ ಬಿಟ್ಟಿ ಕಸ ಎಸೆಯುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಕ್ರಮಕೈಗೊಂಡು ಕಸ ಹಾಕುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ಪಟ್ಟಣದ ಕೆಲವು ಅಂಗಡಿ ಮುಂಗಟ್ಟು, ಮನೆಗಳ ಮಾಲೀಕರು ಸ್ಥಳೀಯವಾಗಿ ಒಟ್ಟಾಗುವ ಕಸವನ್ನು ಮೀಸಲು ಅರಣ್ಯ ಬದಿಯಲ್ಲಿ ತಂದು ಹಾಕುವಿದರಿಂದ ಹಲವು ಕಡೆಗಳಲ್ಲಿ ಗಬ್ಬು ನಾರುತ್ತಿದೆ. ಇನ್ನು ಕೆಲವೆಡೆ ಕೋಳಿ ತ್ಯಾಜ್ಯ, ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ಗಳನ್ನು ಬೇಕಾಬಿಟ್ಟಿಯಾಗಿ ಎಸೆದು ಹೋಗುತ್ತಿದ್ದಾರೆ.ಇದರಿಂದ ಪರಿಸರ ಮಲಿನವಾಗಿ, ವನ್ಯಜೀವಿಗಳಿಗೂ ಸಮಸ್ಯೆಯಾಗುತ್ತಿದೆ. ಕಸ ಕೊಳೆತ ದುರ್ನಾತದಿಂದ ಮುಖ್ಯ ರಸ್ತೆಯಲ್ಲಿ ತಿರುಗಾಡದ ಪರಿಸ್ಥಿತಿ ಎದುರಾಗಿದೆ.
ರಾತ್ರಿ ವೇಳೆಯಲ್ಲಿ ದುಷ್ಕರ್ಮಿಗಳು ಅರಣ್ಯ ಪ್ರದೇಶದಲ್ಲಿ ಕಸ ತಂದು ಹಾಕುತ್ತಿದ್ದು, ಈ ಬಗ್ಗೆ ಇಲಾಖೆಯಿಂದ ರಾತ್ರಿ ಗಸ್ತು ಹೆಚ್ಚಿಸಲಾಗುವುದು. ಈ ಬಗ್ಗೆ ಆಯಾ ವ್ಯಾಪ್ತಿ ಗ್ರಾಮ ಪಂಚಾಯಿತಿಗಳಿಗೂ ತಿಳಿಸಲಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುವುದು. ಪೊಲೀಸ್ ಇಲಾಖೆಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು.
ಬಾಳೆಹೊನ್ನೂರಿನಿಂದ ಚಿಕ್ಕಮಗಳೂರು ತೆರಳುವ ಎಲೆಕಲ್ಲು ಮೀಸಲು ಅರಣ್ಯದ ಬಳಿ ಮುಖ್ಯರಸ್ತೆ ಬದಿ ಕಸ ಎಸೆದಿರುವುದು.