ವಿಶೇಷ ವರದಿ
ಹೊನ್ನಾವರ: ಇಲ್ಲಿನ ಹೊನ್ನಾವರ ಪ್ರವಾಸಿ ತಾಣವಾಗಿ ಪ್ರತಿದಿನ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಆದರೆ ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ಬೀಳುತ್ತಿದೆ. ಒಂದೆಡೆ ನೈಸರ್ಗಿಕ ಸೊಬಗಿಗೆ ಜನತೆ ಮಾರುಹೋಗಿದ್ದರೆ, ಇನ್ನೊಂದೆಡೆ ಮಾನವ ನಿರ್ಮಿತ ತ್ಯಾಜ್ಯದ ರಾಶಿ ನೋಡಿ ಅಸಹ್ಯ ಪಡುವಂತಾಗಿದೆ.ಇಲ್ಲಿನ ಪಟ್ಟಣ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿನ ಕಸ ತೆಗೆದು ಹಾಕುವ ಕೆಲಸ ಮರೆತಂತಿದೆ. ಇನ್ನು ಪಪಂ ವ್ಯಾಪ್ತಿಯಿಂದ ಹೊರಗಡೆ ಆಯಾ ಗ್ರಾಪಂಗಳು ಕಸವನ್ನು ತೆಗೆದು ಹಾಕುವ ಗೋಜಿಗೆ ಹೋಗಿಲ್ಲ. ಇದ್ಯಾವುದೂ ತಮ್ಮ ಕೆಲಸವೇ ಅಲ್ಲ ಎನ್ನುವಂತೆ ವರ್ತಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ತಾಲೂಕಿನ ಮಾರುಕಟ್ಟೆಯ ಸಮೀಪದ ರಸ್ತೆಯ ಪಕ್ಕದಲ್ಲಿ ಕಸದ ರಾಶಿಯೇ ಬಿದ್ದಿದೆ. ಅಲ್ಲಿಯೇ ಸಮೀಪದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಇದೆ. ಕಾಲೇಜಿನ ಗೇಟಿನ ಮುಂದಿರುವ ಖಾಲಿ ಜಾಗದಲ್ಲಿ ಹಾಗೂ ಹೆದ್ದಾರಿಯ ಪಕ್ಕದ ಗಟಾರದಲ್ಲಿ ಪ್ಲಾಸ್ಟಿಕ್ ಕಸದ ರಾಶಿಯೇ ತುಂಬಿದೆ. ಇದರಿಂದಾಗಿ ಬೀದಿನಾಯಿ, ದನಕರುಗಳು ಈ ಪ್ಲಾಸ್ಟಿಕ್‌ಗಳನ್ನು ತಿಂದು ಸಾಯುವ ಪರಿಸ್ಥಿತಿ ಎದುರಾಗಬಹುದು. ಈ ಹೆದ್ದಾರಿಯಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪ್ರಮೇಯ ಎದುರಾಗಿದೆ.ದಿನನಿತ್ಯ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತದೆ. ಹೀಗಿದ್ದೂ ಕಣ್ಣಿದ್ದರೂ ಕುರುಡಾಗಿದೆ ನಮ್ಮ ಆಡಳಿತ ವ್ಯವಸ್ಥೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ವಾಕಿಂಗ್ ಹೋಗುವ ಜನತೆ ಇಲ್ಲಿನ ಪರಿಸ್ಥಿತಿಯನ್ನು ನೋಡಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಬಯ್ಯುತ್ತಾ ಸಾಗುತ್ತಿದ್ದಾರೆ.
ಇಕೋಬೀಚ್ ಹೋಗುವ ರಸ್ತೆಯಲ್ಲೂ ಇದೇ ಕಥೆ:ಇನ್ನು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿಯೂ ಕಸದ ರಾಶಿಯೇ ಬಿದ್ದಿದೆ. ಶರಾವತಿ ನದಿಯ ಸೇತುವೆ ದಾಟಿ ಮುಂದೆ ಸಾಗಿದರೆ ಸಿಗುವ ಕಾಸರಕೋಡಿನ ಇಕೋ ಬೀಚ್ ಹೋಗುವ ರಸ್ತೆಯ ಪಕ್ಕದಲ್ಲಿ ಹಾಗೂ ಹೊನ್ನಾವರ ತಾಲೂಕಿನ ಪ್ರಸಿದ್ಧ ದೇವಾಲಯ ಇಡಗುಂಜಿ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿಯಲ್ಲಿಯೂ ಕಸದ ರಾಶಿ ಬಿದ್ದಿದೆ.
ಇಲ್ಲಿನ ಗ್ರಾಪಂ ಸೂಕ್ತವಾಗಿ ಕಸ ವಿಲೇವಾರಿ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ. ನಮ್ಮ ತಾಲೂಕು ಸಹಜವಾಗಿಯೇ ಪ್ರವಾಸೋದ್ಯಮಕ್ಕೆ ಹೆಸರುವಾಗಿದ್ದು , ದೇಶ-ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಅಲ್ಲದೆ ಇಕೋ ಬೀಚ್‌ಗೆ ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ಇದ್ದು, ಅಂತಹ ಸ್ಥಳಕ್ಕೆ ತಲುಪುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿ ಇದ್ದರೆ ನಮ್ಮ ಮಾನವನ್ನು ನಾವೇ ಹರಾಜಿಗೆ ಹಾಕಿದಂತೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿಗೆ ಬಂದ ಕೆಲವು ಪ್ರವಾಸಿಗರು ಕಸದ ರಾಶಿ ಹಾಗೂ ಸ್ವಚ್ಛತೆ ಕುರಿತಾದ ವಿಡಿಯೋ ಅಥವಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದನ್ನು ವೈರಲ್ ಮಾಡುತ್ತಾರೆ. ಇದರಿಂದ ತಾಲೂಕಿಗೆ ಕಳಂಬ ಬರುತ್ತದೆ ಎನ್ನುತ್ತಾರೆ ಸ್ಥಳೀಯರು.ಸ್ಥಳೀಯ ಆಡಳಿತಗಳು ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಅಂತೆಯೇ ಜನರು ಸಹ ಪರಿಸರ ಹಾಳು ಮಾಡಬಾರದು ಅನ್ನೋ ಮನಸ್ಥಿತಿ ಬೆಳೆಸಿಕೊಳ್ಳಲಿ ಎಂಬುದು ಪ್ರಜ್ಞಾವಂತರ ಆಶಯ.
ಹೊನ್ನಾವರ ನೈಜ ಸೌಂದರ್ಯದಿಂದ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಒಂದು ಹೆಸರಿದೆ. ಆ ಹೆಸರು ಕಸದ ರಾಶಿಯಿಂದ ಹಾಳಾಗಬಾರದು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಮಂಜುನಾಥ ಗೌಡ